ಹೊಸದಿಗಂತ ವರದಿ, ತುಮಕೂರು:
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪೂಜ್ಯ ಶಿವಕುಮಾರ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಪ್ರತಿಷ್ಠಿತ ಸ್ಪೈರ್ ಕ್ಲೀನಿಕ್ ಹಾಗೂ ಸುಮಿತ್ರಾ ಮಹದೇವಪ್ಪ ಚಾರಿಟಬಲ್ ಟ್ರಸ್ಟ್(ರಿ) ಸಹಯೋಗದಲ್ಲಿ 120ಕ್ಕೂ ಹೆಚ್ಚು ಮಂದಿಗೆ ಮಂಡಿ ಚಿಪ್ಪು ಮ ಮರುಜೋಡಣೆಗಳು ನಡೆದಿದ್ದು, ಇದರ ಭಾಗವಾಗಿದ್ದ ಸ್ಪೈರ್ ಕ್ಲಿನಿಕ್ ಮುಖ್ಯಸ್ಥರಾದ ಡಾ.ದೀಪಕ್ ಶಿವರಾತ್ರಿಯವರ ಕಾರ್ಯ ಅಭಿನಂದನೀಯ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀಗಳಾದ ಸಿದ್ಧಲಿಂಗ ಮಹಾಸ್ವಾಮೀಜಿಯವರು ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ವೈದ್ಯ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶ್ರೀಗಳು ಕಳೆದ 6 ತಿಂಗಳಿನಿಂದ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಎಲ್ಲಾ ವಯೋಮಾನದವರಿಗೆ ಚಿಕಿತ್ಸೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ120 ಜನರು ಮಂಡಿ ಚಿಪ್ಪು ಮರುಜೋಡಣೆಗೆ ಒಳಗಾಗಿ ತಮ್ಮ ಎಂದಿನ ಜೀವನಕ್ಕೆ ಮರಳಿದ್ದಾರೆ. ಶಿವಕುಮಾರ ಶ್ರೀಗಳ ಕನಸಿನಂತೆ ಆರೋಗ್ಯ ಸೇವೆ ಸಾರ್ಥಕವಾಗುತ್ತಿರುವುದು ಸಂತಸ ಉಂಟುಮಾಡಿದೆ ಎಂದರು.
ಕೀಲುಮೂಳೆ ತಜ್ಞ ಡಾ.ದೀಪಕ್ ಶಿವರಾತ್ರಿ ಮಾತನಾಡಿ ಶಿವಕುಮಾರ ಶ್ರೀಗಳು ನಮ್ಮಂತ ಎಷ್ಟೋ ವೈದ್ಯರಿಗೆ ತಮ್ಮ ತ್ರಿವಿಧ ದಾಸೋಹ ಸೇವೆಯ ಮೂಲಕ ಸೇವೆಯ ಮಹತ್ವ ಸಾರಿದ್ದಾರೆ. ಅವರ ಜನ್ಮದಿನ ಪ್ರಯುಕ್ತ ನಮಗೆ ಸಣ್ಣ ಸೇವೆ ಮಾಡಲಿಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದರು.
ಪ್ರತಿ ಗುರುವಾರ ಲಭ್ಯ:
ಸಿದ್ದಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಸ್ಪೈರ್ ಕ್ಲೀನಿಕ್ ಸಹಯೋಗ ಮುಂದುವರೆಯಲಿದ್ದು ಪ್ರತಿ ಗುರುವಾರ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಕೀಲುಮೂಳೆ ತಜ್ಞರಾದ ಡಾ.ದೀಪಕ್ ಶಿವರಾತ್ರಿ ಹಾಗೂ ಅವರ ತಂಡ ಲಭ್ಯವಿರುತ್ತಾರೆ ಎಂದರು.
ಸಿದ್ದಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರದಾ ಡಾ.ಶಾಲಿನಿ ಎಂ, ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ,ಸಿಇಓ ಸಂಜೀವ್ ಕುಮಾರ್, ಕೀಲುಮೂಳೆ ತಜ್ಞರಾದ ಡಾ.ಆದರ್ಶ, ಡಾ.ದುಷ್ಯಂತ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ,ಪಿಆರ್‌ಓ ಕಾಂತರಾಜು, ಈಶ್ವರ್ ಮುಂತಾದವರಿದ್ದರು.