ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ನಗರದಲ್ಲಿ ಸರ್ವಋತು ರಸ್ತೆ ಅಭಿವೃದ್ಧಿಗೆ 13 ಕೋಟಿ ರೂ. ವೆಚ್ಚದ ಟೆಂಡರ್ ಅನುಮೋದನೆ ಆಗಿದ್ದು, ಆ ನಿಟ್ಟಿನಲ್ಲಿ 2.43 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ನಾಲ್ಕನೇ ಹಂತದಡಿ ನಗರದ ಭಗವತಿ ದೇವಸ್ಥಾನ ಬಳಿಯಿಂದ ಗಾಳಿಬೀಡು ಜಂಕ್ಷನ್ವರೆಗೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಡಿಕೇರಿ ನಗರದಲ್ಲಿನ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಮುಂದಿನ ಶುಕ್ರವಾರ ಏರ್ಪಡಿಸಲಾಗಿದೆ. ಆ ನಿಟ್ಟಿನಲ್ಲಿ ನಗರದ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಲ್ಲಿ ಕ್ರಮವಹಿಸಲಾಗಿದೆ ಎಂದರು.
ಮಡಿಕೇರಿ ನಗರಸಭೆಯು ತೆರಿಗೆ ಸಂಗ್ರಹದಲ್ಲಿ ಶೇಕಡಾವಾರು ಪ್ರಗತಿ ಸಾಧಿಸಿದೆ. ನಗರಸಭೆಯಿಂದ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಕೆಲಸಗಳು ನಡೆದಿವೆ. ನಗರದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಮತ್ತು ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ಶಾಸಕರು ಹೇಳಿದರು.
ವಿವಿಧ ರಸ್ತೆ ಮತ್ತು ಒರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಮಡಿಕೇರಿ ನಗರದ ವಾರ್ಡ್ ನಂಬರ್ 1 ರಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.8 ರಲ್ಲಿ ಒಳದಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.9 ರಲ್ಲಿ ಗೆಜ್ಜೆ ಸಂಗಪ್ಪ ಸಮುದಾಯ ಭವನ ಉನ್ನತ್ತೀಕರಣ ಕಾಮಗಾರಿ, ವಾರ್ಡ್ ನಂ.13 ರ ಪುಟಾಣಿ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂಬರ್ 14 ರ ಮುನೇಶ್ವರ ದೇವಸ್ಥಾನ ಹತ್ತಿರ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.23 ರ ಅಶೋಕಪುರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹೀಗೆ ಒಟ್ಟು 243.78 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪೌರಾಯುಕ್ತ ವಿಜಯ, ನಗರಸಭೆ ಸದಸ್ಯರು, ಇತರರು ಇದ್ದರು.