August 24, 2026
Monday, August 24, 2026
spot_img

ಯುದ್ಧದ ಕರಾಳ ನೆರಳಲ್ಲಿ 13 ಭಾರತೀಯ ನಾವಿಕರು: ಉಕ್ರೇನ್ ಬಂದರಿನಿಂದ ತುರ್ತು ರಕ್ಷಣೆಗೆ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ–ಉಕ್ರೇನ್ ಸಂಘರ್ಷ ತೀವ್ರಗೊಂಡಿರುವ ನಡುವೆ ಉಕ್ರೇನ್‌ನ ಚೋರ್ನೊಮೋರ್ಸ್ಕ್ ಬಂದರಿನಲ್ಲಿ ನಿಂತಿರುವ ಸರಕು ಹಡಗು ಎಂ.ವಿ. ಅಮೀರ್-1ನಲ್ಲಿ 13 ಭಾರತೀಯರು ಸೇರಿ 15 ಸಿಬ್ಬಂದಿ ಸಿಲುಕಿರುವ ಘಟನೆ ಆತಂಕ ಮೂಡಿಸಿದೆ.

ಸತತ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಭೀತಿಯಿಂದ ಸಿಬ್ಬಂದಿ ಜೀವಭಯದಲ್ಲೇ ದಿನ ಕಳೆಯುತ್ತಿದ್ದಾರೆ ಎಂದು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ತಿಳಿಸಿದೆ.

ಡ್ರೋನ್ ದಾಳಿಗಳ ನಡುವೆ ಜೀವಭಯ

ಹಡಗಿನ ಸುತ್ತಮುತ್ತ ನಿರಂತರ ದಾಳಿ ನಡೆಯುತ್ತಿರುವ ಕಾರಣ ಸಿಬ್ಬಂದಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು ಎಂಬ ಆತಂಕದಲ್ಲಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಎಸ್‌ಯುಐ, ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ತಕ್ಷಣ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ, ಹಡಗು ಮಾಲೀಕರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದೆ.

ಇದನ್ನೂ ಓದಿ:

ಸಹಾಯಕ್ಕೆ ತುರ್ತು ಮನವಿ

ಸಂಘವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹಡಗಿನ ಸುತ್ತ ಹೊಗೆ ಆವರಿಸಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಬಂದರಿನ ಭದ್ರತಾ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಉಕ್ರೇನ್ ಸರ್ಕಾರ ಅಥವಾ ಹಡಗು ಸಂಸ್ಥೆಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಕಪ್ಪು ಸಮುದ್ರದಲ್ಲಿ ಹೆಚ್ಚಿದ ಉದ್ವಿಗ್ನತೆ

ಇತ್ತೀಚಿನ ದಿನಗಳಲ್ಲಿ ಕಪ್ಪು ಸಮುದ್ರ ಪ್ರದೇಶದಲ್ಲಿ ವ್ಯಾಪಾರ ಹಡಗುಗಳ ಮೇಲೆ ದಾಳಿಗಳು ಹೆಚ್ಚಾಗಿವೆ. ಕಳೆದ ವಾರ ಭಾರತೀಯ ನಾವಿಕನೊಬ್ಬ ಮೃತಪಟ್ಟ ಘಟನೆ ಬಳಿಕ ಭಾರತ ಉಕ್ರೇನ್ ರಾಯಭಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಮತ್ತೊಮ್ಮೆ ಭಾರತೀಯ ನಾವಿಕರು ಸಂಘರ್ಷ ವಲಯದಲ್ಲಿ ಸಿಲುಕಿರುವುದು ಕಳವಳಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !