ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ 7 ತಿಂಗಳಲ್ಲಿ ನೂರಾರು ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲಾಸ್ಪತ್ರೆ ಎಂದರೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದೆ ಎನ್ನುವ ಆತಂಕಕಾರಿ ವರದಿ ಕೇಳಿ ಬಂದಿದೆ. ಇದನ್ನೂ ಕೇಳಿದ ಆರೋಗ್ಯ ಸಚಿವರೇ ನಿಬ್ಬೆರಗಾಗಿದ್ದಾರೆ.
ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 135 ನವಜಾತ ಶಿಶುಗಳು 28 ಗರ್ಭಿಣಿಯರು ಸಾವನ್ನಪ್ಪಿರುವ ವರದಿಯಾಗಿದೆ. ಅದರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಐದು ಸಾವಾಗಿದ್ದರೆ, ಇನ್ನುಳಿದವರು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿ ತಿಂಗಳು 600 ರಿಂದ 700 ಹೆರಿಗೆ ಆಗುವ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮುಂಚಿತವಾಗಿ ಗರ್ಭಿಣಿಯರನ್ನು ಕಳಿಸುವಂತೆ ಸೂಚನೆ ನೀಡಲಾಗಿದೆ.
ಇನ್ನೂ ಜಿಲ್ಲೆಯ ಪ್ರಾಥಮಿಕ ಹಾಗು ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾವಹಿಸುವಂತೆ ಡಿಹೆಚ್‌ಓ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಅಭಿಯಾನವನ್ನೇ ಹಮ್ಮಿಕೊಂಡಿದ್ದು, ಜಿಲ್ಲಾಸ್ಪತ್ರೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಕೂಡ ಹೆಚ್ಚಿದೆ. ಅಲ್ಲದೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಸಿಜೇರಿಯನ್ ಡೆಲಿವರಿಗಳು ಶೇ.75ರಷ್ಟು ಜಾಸ್ತಿ ಇದೆ. ಅದರ ಬಗ್ಗೆ ಕ್ರಮ ವಹಿಸುವಂತೆ ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಒಟ್ಟಾರೆ ಕಳೆದ 7 ತಿಂಗಳಲ್ಲಿ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಇದರ ಬಗ್ಗೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿದರೆ ಬಡ ರೋಗಿಗಳ ಜೀವ ಉಳಿಸಿದಂತಾಗುತ್ತದೆ.