1350 ಕೊಲೆಗಳು ಹೆಚ್ಚೋ, 400 ಕೊಲೆಗೆಳು ಹೆಚ್ಚೋ: ಸಚಿವ ರಾಮಲಿಂಗಾರೆಡ್ಡಿ

ಹೊಸದಿಗಂತ ವರದಿ, ಚಿತ್ರದುರ್ಗ :

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ೧೩೫೦ಕ್ಕೂ ಹೆಚ್ಚು ಕೊಲೆಗಳು ನಡೆದಿವೆ. ಒಂದೇ ವರ್ಷದಲ್ಲಿ ಇಷ್ಟೊಂದು ಕೊಲೆಗಳು ಆಗಿವೆ. ಕಳೆದ ನಾಲ್ಕು ತಿಂಗಳಲ್ಲಿ ೪೦೦ ಕೊಲೆ ಆಗಿವೆ. ೧೩೫೦ ಜಾಸ್ತಿನಾ ಅಥವಾ ೪೦೦ ಕೊಲೆ ಜಾಸ್ತಿನಾ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರ ಪರ ಪ್ರಚಾರ ಕಾರ್ಯಕ್ಕೆ ಸೋಮವಾರ ಚಿತ್ರದುರ್ಗಕ್ಕೆ ಆಗಮಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಸುಮ್ಮನೆ ಆ ರೀತಿ ಹೇಳುತ್ತಿದ್ದಾರೆ ಎಂದರು.
ಬಿಜೆಪಿಯವರು ಲೆಕ್ಕ ತಿಳಿಯದೆ ಸುಮ್ಮನೆ ಮಾತನಾಡುತ್ತಾರೆ. ಯಾರ ಅವಧಿಯಲ್ಲಿ ಕೊಲೆಗಳು ಹೆಚ್ಚು ಆಗಿವೆ ಎಂಬುದನ್ನು ಅಂಕಿಅಂಶ ನೋಡಬೇಕು. ಅಂಕಿಅಂಶ ನೋಡದೆ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು. ದೃಶ್ಯ ಮಾಧ್ಯಮದವರು ಟಿ.ವಿ.ಗಳಲ್ಲಿ ತೋರಿಸುವುದನ್ನು ನೋಡಿ ಬಿಜೆಪಿಯವರು ಈ ರೀತಿ ಮಾತನಾಡುತ್ತಾರೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ತಳಕು ಹಾಕಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ರೇವಣ್ಣ, ಶಿವರಾಮೇಗೌಡ, ದೇವರಾಜೇಗೌಡ ಅವರ ವೈಯಕ್ತಿಕ ಕಿತ್ತಾಟದಿಂದ ಈ ರೀತಿ ರಂಪಾಟ ಆಗುತ್ತಿದೆ. ದೇವರಾಜೇಗೌಡ ವಕೀಲರು, ಬಿಜೆಪಿ ಮುಖಂಡರು. ನಾನು ಕೂಡ ಆ ವಿಡಿಯೋಗಳನ್ನು ನೋಡಿದ್ದೇನೆ. ಅದರಲ್ಲಿ ದೇವೇಗೌಡ್ರು ಕುಟುಂಬದಿಂದ ತೊಂದರೆ ಆಗಿದೆ ಅಂತ ಹೇಳಿಕೊಂಡಿದ್ದಾರೆ. ಅವರ ವೈಯಕ್ತಿಕ ಜಗಳವನ್ನು ರಾಜ್ಯ ಮಟ್ಟಕ್ಕೆ ತಂದಿದ್ದಾರೆ ಎಂದರು.
ಹೊಳೆನರಸೀಪುರದಲ್ಲಿ ಇರಬೇಕಿದ್ದ ಜಗಳ ರಾಜ್ಯ ಮಟ್ಟಕ್ಕೆ ಬಂದಿದೆ. ರಾಜ್ಯ ಸರ್ಕಾರಕ್ಕೂ ಪೆನ್‌ಡ್ರೈವ್‌ಗೂ, ಡಿ.ಕೆ.ಶಿವಕುಮಾರ್ ಅವರಿಗೂ ಯಾವುದೇ ಸಂಬಂಧ ಇಲ್ಲ. ದೇವರಾಜೇಗೌಡ ರಾಜಕೀಯ ಪಕ್ಷದ ಸದಸ್ಯ. ಬಿಜೆಪಿ ಪಕ್ಷದಿಂದ ಒಮ್ಮೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಹಾಗಾಗಿ ಬಿಜೆಪಿಯವರು ಏನು ಹೇಳುತ್ತಿದ್ದಾರೆ. ಅದನ್ನೇ ಇವರು ಹೇಳುತ್ತಾರೆ. ನಮ್ಮ ಸರ್ಕಾರಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಪೆನ್‌ಡ್ರೈವ್‌ಗೂ ಯಾವ ಸಂಬಂಧನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರ ಪತನ ಆಗೋದಿಲ್ಲ. ಸರ್ಕಾರ ಏಕೆ ಪತನ ಆಗುತ್ತೆ?. ಅವರು ಕೇವಲ ಸಿಂಗಲ್ ಡಿಜಿಟ್‌ನಲ್ಲಿ ಇದ್ದಾರೆ. ಜೆಡಿಎಸ್, ಬಿಜೆಪಿ ಎಲ್ಲಾ ಸೇರಿ ಸಿಂಗಲ್ ಡಿಜಿಟ್‌ನಲ್ಲಿ ಇದ್ದಾರೆ. ಹಾಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ಪತನವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಬಳಿಕ ಸಚಿವ ಸಂಪುಟ ಪುನರ್‌ರಚನೆ ಆಗುತ್ತದೆ ಎಂಬ ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ಇಲ್ಲಿಗೆ ಬಂದಾಗ ನೀವೇ ಕೇಳಬೇಕು. ಅದೆಲ್ಲಾ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಮಾಧ್ಯಮಗಳ ಮೂಲಕ ಯಾರೂ ಸಹ ಸುಮ್ಮನೆ ಹೀಗೆ ಮಾತಾಡಬಾರದು. ಹೈಕಮಾಂಡ್ ನಾಯಕರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಆರ್.ಎಸ್. ವಿದ್ಯಾಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರ ಜೊತೆ ಮಾತನಾಡಿದರು. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರ ಪರ ಮತ ಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಪ್ರಶತಮ ಪ್ರಾಶಸ್ತ್ಯದ ಮತವನ್ನು ನೀಡುವಂತೆ ಕೋರಿದರು. ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!