ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕ್ಕಿಂನಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ ಎಂದು ಸಿಕ್ಕಿಂ ಸರ್ಕಾರ ದೃಢಪಡಿಸಿದೆ. ಮೃತ 14 ಮಂದಿ ನಾಗರಿಕರಾಗಿದ್ದು, 102 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ 3,000 ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿರುವ ಆತಂಕವಿದೆ. ಚುಂಗ್‌ಥಾಂಗ್‌ನ ತೀಸ್ತಾ ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿರುವ 12-14 ಕಾರ್ಮಿಕರು ಇನ್ನೂ ಅಣೆಕಟ್ಟಿನ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಾದ್ಯಂತ 26 ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಬರ್ದಂಗ್‌ನಲ್ಲಿ 23 ಸೇನಾ ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಯೋಧರ ರಕ್ಷಣೆಗಾಗಿ ತ್ರಶಕ್ತಿ ಕಾರ್ಪ್ಸ್ ಪಡೆ ಫೀಲ್ಡಿಗಿಳಿದಿದೆ.
ಪ್ರವಾಹದಿಂದಾಗಿ ರಾಜ್ಯದಲ್ಲಿ ಆಹಾರ ಕೊರತೆ ಎದುರಾಗುವ ಆತಂಕದಲ್ಲಿ ಅಧಿಕಾರಿಗಳಿದ್ದಾರೆ. ಸಿಲಿಗುರಿ, ಬೈಲಿ ಸೇತುವೆಗಳ ಅಗತ್ಯಗಳನ್ನು ಭಾರತೀಯ ಸೇನೆ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ಮೂಲಕ ಹಾಕಲಾಗುವುದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಚುಂಗ್‌ಥಾಂಗ್‌ನ ಪೊಲೀಸ್ ಠಾಣೆ ಕೂಡ ಧ್ವಂಸಗೊಂಡಿದೆ. ಮಂಗನ್ ಜಿಲ್ಲೆಯ ಸಾಂಗ್‌ಕಲನ್ ಮತ್ತು ಟೂಂಗ್‌ನಲ್ಲಿನ ಹಠಾತ್ ಪ್ರವಾಹದಿಂದ ಫೈಬರ್ ಕೇಬಲ್ ಲೈನ್‌ಗಳು ನಾಶವಾಗುತ್ತಿರುವುದರಿಂದ ಚುಂಗ್‌ಥಾಂಗ್ ಮತ್ತು ಉತ್ತರ ಸಿಕ್ಕಿಂನ ಹೆಚ್ಚಿನ ಮೊಬೈಲ್ ನೆಟ್‌ವರ್ಕ್ ಸಂಪರ್ಕವನ್ನು ಕಡಿತಗೊಂಡಿದೆ.
ರಾಜ್ಯ ಸರ್ಕಾರವು ಸಿಂಗ್ಟಾಮ್, ರಂಗ್ಪೋ, ದಿಕ್ಚು ಮತ್ತು ಆದರ್ಶ್ ಗಾಂವ್ನಲ್ಲಿ 18 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಅಲ್ಲಿನ ಪರಿಹಾರ ಶಿಬಿರಗಳನ್ನು ಭಾರತೀಯ ಸೇನೆ ಮತ್ತು ಇತರ ಅರೆಸೇನಾಪಡೆಗಳು ನೋಡಿಕೊಳ್ಳುತ್ತಿವೆ.