ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ಪೊಲೀಸರು ಕಳೆದ 24 ಗಂಟೆಗಳಲ್ಲಿ ವಿವಿಧ ಸಂಘಟನೆಗಳ 14 ಉಗ್ರರನ್ನು ಬಂಧಿಸಿದ್ದು, ಅವರಿಂದ ಶಸ್ತ್ರಾಸ್ತ್ರ, ಮದ್ದುಗುಂಡು, ನಗದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ 14 ಉಗ್ರರನ್ನು ತೌಬಾಲ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೆಂಗ್ನೌಪಾಲ್, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
14 ಉಗ್ರರ ಪೈಕಿ ಇಂಫಾಲ್ ಪೂರ್ವ ಮತ್ತು ತೌಬಲ್ ಜಿಲ್ಲೆಗಳಿಂದ ತಲಾ ನಾಲ್ವರನ್ನು, ತೆಂಗ್ನೌಪಾಲ್ ಜಿಲ್ಲೆಯಿಂದ ಮೂವರನ್ನು, ಇಂಫಾಲ್ ಪಶ್ಚಿಮ, ಬಿಷ್ಣುಪುರ ಮತ್ತು ಜಿರಿಬಾಮ್ ಜಿಲ್ಲೆಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರು ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ (ಕೆಸಿಪಿ), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್), ಪ್ರೆಪಾಕ್ ಮತ್ತು ಸೋಷಿಯಲಿಸ್ಟ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಎಸ್ಒಆರ್ಇಪಿಎ) ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.
ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು, ಗುತ್ತಿಗೆದಾರರು, ವ್ಯಾಪಾರಿಗಳು ಮತ್ತು ಸಾಮಾನ್ಯ ಜನರಿಂದ ಹಣ ಸುಲಿಗೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಬಂಧಿತ ಉಗ್ರರು ಭಾಗಿಯಾಗಿದ್ದರು. ಬಂಧಿತರಿಂದ ಪಿಸ್ತೂಲ್ಗಳು, ಹೈ ಪವರ್ ಗ್ರೆನೇಡ್ಗಳು, ಮೊಬೈಲ್ ಹ್ಯಾಂಡ್ ಸೆಟ್ಗಳು, ಕಾರು, ಹಲವಾರು ದ್ವಿಚಕ್ರ ವಾಹನಗಳು ಮತ್ತು ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.