ಹೊಸದಿಗಂತ ಡಿಜಿಟಲ್ ಡೆಸ್ಕ್:
ತೈಲ ಕಂಪನಿ ʼಶೆಲ್ʼ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ಜಗತ್ತಿನಾದ್ಯಂತ ತೈಲ ವಿತರಿಸುವ ಈ ದೈತ್ಯ ಕಂಪನಿಯ ವಿರುದ್ಧ ನೈಜೀರಿಯಾದ 14 ಸಾವಿರ ಮಂದಿ ಕೇಸು ದಾಖಲಿಸಿದ್ದಾರೆ. ನೈಜೀರಿಯಾದ ಎರಡು ಸಮುದಾಯದ ಜನರು ತಮ್ಮ ಜಲ ಮೂಲಗಳು ಕಲುಷಿತಗೊಂಡಿರುವುದಕ್ಕೆ ಶೆಲ್ ಕಂಪನಿಯೇ ಕಾರಣವೆಂದು ಲಂಡನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನೈಜಿರಿಯಾ ದೇಶದ ಒಗಲೆ ಪ್ರದೇಶದಲ್ಲಿ ನೈಜರ್‌ನದಿ ಪಾತ್ರದಲ್ಲಿ ವಾಸಿಸುವ ಜನರೀಗ ತೈಲ ಕಂಪನಿ ಶೆಲ್ ವಿರುದ್ಧ ನ್ಯಾಯ ಕೇಳುತ್ತಿದ್ದಾರೆ. ನೈಜರ್ ನದಿಯು ತೈಲ ತ್ಯಾಜಗಳಿಂದ ಮಾಲಿನ್ಯಗೊಂಡಿದ್ದು ನಮ್ಮ ಜೀವನಾಧಾರವಾಗಿರೋ ಈ ನದಿಯು ಕಲುಷಿತಗೊಂಡಿರುವ ಪರಿಣಾಮ ಬದುಕು ದುಸ್ತರವಾಗಿದೆ. ಜನಜೀವನ ಬಾಧಿತವಾಗಿದ್ದು ಕೃಷಿ, ಮೀನುಗಾರಿಕೆಗಳು ನಾಶವಾಗಿವೆ. ಇದಕ್ಕೆಲ್ಲ ಕಾರಣ ಶೆಲ್ ಕಂಪನಿ. ಈ ಕಂಪನಿಯ ತೈಲಘಟಕಗಳಿಂದ ಹೊರಸೂಸುವ ತ್ಯಾಜ್ಯಗಳು ನದಿಯನ್ನು ಕಲುಷಿತಗೊಳಿಸಿವೆ. ಹಾಗಾಗಿ ಕಂಪನಿಯು ತಮ್ಮ ಜೀವನ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು 14 ಸಾವಿರ ನೈಜೀರಿಯನ್ನರು ನ್ಯಾಯ ಕೇಳುತ್ತಿದ್ದಾರೆ.
ಆದರೆ ಶೆಲ್ ಕಂಪನಿಯದ್ದು ಬೇರೆಯದೇ ವರಸೆ, ಈ ಸೋರಿಕೆ 5 ವರ್ಷಗಳ ಹಿಂದೆಯೇ ಸಂಭವಿಸಿದ್ದು. ಅದಕ್ಕೆ ಈಗ ನ್ಯಾಯ ಕೇಳಲು ಸಾಧ್ಯವಿಲ್ಲ. ಆ ಮಾಲಿನ್ಯವನ್ನು ಸ್ವಚ್ಛಗೊಳಿಸುವಂತೆ ಕೇಳಲು ಇವರಿಗೆ ಯಾವುದೇ ಕಾನೂನು ಸ್ಥಾನಮಾನವಿಲ್ಲ. ಅಲ್ಲದೇ ಕೆಲವು ಸಂಘಟಿತ ಗ್ಯಾಂಗುಗಳು ತನ್ನ ತೈಲ ಪೈಪ್‌ಲೈನ ಗಳನ್ನು ಒಡೆದು ಅದರಿಂದ ತೈಲವನ್ನು ಹೊರತೆಗೆಯುತ್ತಿದ್ದಾರೆ. ಇದು ಸೋರಿಕೆಗಳಿಗೆ ಮೂಲ ಕಾರಣವಾಗಿದೆ. ಹಾಗಾಗಿ ಇದಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಕಂಪನಿ ಹೇಳಿದೆ.