ಹೊಸದಿಗಂತ ಡಿಜಿಟಲ್ ಡೆಸ್ಕ್:
15 ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (bbmp) ವ್ಯಾಪ್ತಿಯಲ್ಲಿರುವ ರಸ್ತೆಗಳ ಗುಂಡಿ ಮುಚ್ಚಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಗಡುವು ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಹೀಗಾಗಿ ತುರ್ತಾಗಿ ಗಮನಹರಿಸಿ ಗುಂಡಿ ಮುಚ್ಚುವಂತೆ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದು, ಸಾರ್ವಜನಿಕರು ರಸ್ತೆ ಗುಂಡಿ ಫೋಟೋ ತೆಗೆದು ಅಪ್ಲೋಡ್ ವ್ಯವಸ್ಥೆ ಇದ್ದು, ಆ್ಯಪ್ ಮೂಲಕ ಈಗಾಗಲೇ ಫೋಟೋ ಜೊತೆ ಜನರು ದೂರು ನೀಡಿದ್ದಾರೆ. 15 ದಿನಗಳ ನಂತರ ನಾನೇ ಸ್ವತಃ ಬೆಂಗಳೂರು ಪ್ರದಕ್ಷಿಣೆ ಹಾಕುತ್ತೇನೆ. ಅಷ್ಟರಲ್ಲಿ ರಸ್ತೆ ಗುಂಡಿ ಮುಚ್ಚಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಹಾಗೂ ಟ್ರಾಫಿಕ್‌ಗೆ ಕಾರಣವಾಗುತ್ತಿವೆ. ಪಾಲಿಕೆಯವರು ಕೇವಲ ಮುಖ್ಯವಾದ ರಸ್ತೆ ಗುಂಡಿ ಮಾತ್ರ ಮುಚ್ಚಿ ಹೋಗುತ್ತಿದ್ದಾರೆ ಎಂದು ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.