ಹೊಸದಿಗಂತ ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಪಾಕಿಸ್ತಾನಿ ಪ್ರಜೆಗಳಿದ್ದು ಇವರೆಲ್ಲ ದೀರ್ಘಾವದಿ ವಿಸಾ ಅಡಿಯಲ್ಲಿ ಬರುವುದರಿಂದ ದೇಶದಿಂದ ಗಡೀಪಾರು ಮಾಡುವ ಸರ್ಕಾರದ ಆದೇಶ ಇವರಿಗೆ ಅನ್ವಯಿಸುವುದಿಲ್ಲ ಆದರೂ ಸಹ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇವರೆಲ್ಲರ ಮೇಲೆ ನಿಗಾ ಇರಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸವಾಗಿದ್ದು ಇವರೆಲ್ಲ ಭಾರತೀಯರಿಗೆ ಮದುವೆಯಾಗಿ ಬಂದ ಪಾಕಿಸ್ತಾನಿ ಮಹಿಳೆಯರಾಗಿದ್ದಾರೆ ಭಟ್ಕಳದಲ್ಲಿ 10 ಜನ ಮಹಿಳೆಯರು ಮತ್ತು 3 ಜನ ಮಕ್ಕಳು ಇದ್ದು ಕಾರವಾರದಲ್ಲಿ ಒಬ್ಬರು ವಾಸವಾಗಿದ್ದಾರೆ, ಇನ್ನೋರ್ವರು ಪಾಕಿಸ್ತಾನಿ ಪಾಸ್ ಪೋರ್ಟ್ ಮೇಲೆ ಬಂದಿದ್ದು ಇದೀಗ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂದ ಅವರು ಪಹಲ್ಗಾಮ್ ಘಟನೆಯ ನಂತರ ದೀರ್ಘಾವದಿ ವಿಸಾ ಹೊರತು ಪಡಿಸಿ ಬೇರೆ ಎಲ್ಲಾ ರೀತಿಯ ವಿಸಾದ ಮೇಲೆ ಭಾರತದಲ್ಲಿ ಇರುವ ಪಾಕಿಸ್ತಾನಿ ಪ್ರಜೆಗಳು ದೇಶ ಬಿಟ್ಟು ತೆರಳುವಂತೆ ಕೇಂದ್ರ ಸರ್ಕಾರ ಗಡುವು ನೀಡಿದೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಪಾಕಿಸ್ತಾನಿ ಪ್ರಜೆಗಳು ದೀರ್ಘಾವದಿ ವಿಸಾ ಎಲ್.ಟಿ.ವಿ ಹೊಂದಿದ್ದು ಗಡಿಪಾರು ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹೊನ್ನಾವರದ ಮಹಿಳೆ ಪಾಕಿಸ್ತಾನದ ವ್ಯಕ್ತಿಗೆ ಮದುವೆಯಾಗಿ ಪಾಕಿಸ್ತಾನದಲ್ಲಿ ವಾಸವಾಗಿದ್ದು ಅಲ್ಲಿನ ಸರ್ಕಾರದ ನಿರ್ಧಾರಕ್ಕೆ ಕಾಯಲಾಗುತ್ತಿದೆ ಎಂದ ಪೊಲೀಸ್ ನಿರೀಕ್ಷಕರು ಜಿಲ್ಲೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸವಾಗಿರುವುದು ಕಂಡು ಬಂದಿಲ್ಲ ಎಂದು ಎಂದು ಹೇಳಿದ್ದಾರೆ.