ಹೊಸದಿಗಂತ ಡಿಜಿಟಲ್ ಡೆಸ್ಕ್:
ದಟ್ಟ ಮಂಜು ಹಾಗೂ ಹೊಗೆ ಆವರಿಸಿದ ಹಿನ್ನೆಲೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, 7 ಮಂದಿ ಸಾವು ಮತ್ತು 25 ಜನ ಗಾಯಗೊಂಡಿರುವ ಘಟನೆ ಅಮೆರಿಕದ ಲೂಯಿಸಿಯಾನ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ಈ ಸರಣಿ ಅಪಘಾತದಲ್ಲಿ 158 ವಾಹನಗಳು ನಜ್ಜುಗುಜ್ಜಾಗಿವೆ. ಹಲವು ವಾಹನಗಳು ಸುಟ್ಟುಕರಕಲಾಗಿವೆ.
ನ್ಯೂ ಓರ್ಲಿಯನ್ಸ್ನ ವಾಯವ್ಯ 55 ಇಂಟರ್ಸ್ಟೇಟ್ ಹೆದ್ದಾರಿಯಲ್ಲಿ ಬೆಳಗ್ಗೆ 9 ಗಂಟೆ ಹೊತ್ತಿಗೆ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ವಾಹನ ಚಾಲಕರಿಗೆ ರಸ್ತೆ ಕಾಣಸಿಲ್ಲ. ಅದರ ಪರಿಣಾಮ ಸರಣಿ ಅಪಘಾತಗಳು ಸಂಭವಿಸಿವೆ. ಈ ದುರ್ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಲೂಸಿಯಾನ ಪೊಲೀಸರು ತಿಳಿಸಿದ್ದಾರೆ.
ಸ್ಟೇಟ್ ಪೊಲೀಸ್ ಫೇಸ್ಬುಕ್ ಪೇಜ್ನಲ್ಲಿ ಈ ದುರಂತದ ವೈಮಾನಿಕ ಚಿತ್ರಗಳನ್ನು ಹೊಂಚಿಕೊಂಡಿದೆ. ಚಿತ್ರಗಳಲ್ಲಿ ರಸ್ತೆಯಲ್ಲಿ ಹಲವು ವಾಹನಗಳು ಒಂದೆಡೆ ರಾಶಿ ಬಿದ್ದಂತೆ, ಒಂದರ ಹಿಂದೆ ಒಂದು ಅಪಘಾತಗೊಂಡು, ಬಹುತೇಕ ವಾಹನಗಳು ಸುಟ್ಟು ಕರಕಲಾದಂತೆ ಕಾಣುತ್ತಿವೆ.