ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಅಯ್ಯಪ್ಪ ದೇವರ ಸನ್ನಿಧಿಯತ್ತ ಲಕ್ಷಾಂತರ ಭಕ್ತರು ಕಟ್ಟುನಿಟ್ಟಿನ ವ್ರತಗಳನ್ನ ಆಚರಣೆ ಮಾಡುತ್ತಾ ಯಾತ್ರೆ ನಡೆಸುತ್ತಿದ್ದಾರೆ.
ಪ್ರತಿಯೊಬ್ಬ ಭಕ್ತರು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರುಶನ ಪಡೆಯಲು ಹಾತೊರೆಯುತ್ತಾರೆ. ಅದಕ್ಕೆ ಬಹುಮುಖ್ಯ ಕಾರಣ ಪವಿತ್ರ ಕ್ಷೇತ್ರದ ಮೇಲಿರುವ ಭಕ್ತಿಭಾವ. ಆದರೆ ಶಬರಿಮಲೆಯ ಪವಿತ್ರವಾದ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಪೋಸ್ ಕೊಟ್ಟಿದ್ದು ಹೊಸ ವಿವಾದಕ್ಕೆ ಗುರಿಯಾಗಿದೆ.
ಶಬರಿಮಲೆ ದೇವಾಲಯದ 18 ಮೆಟ್ಟಿಲುಗಳು ಅಯ್ಯಪ್ಪನ ಭಕ್ತರಿಗೆ ಪವಿತ್ರವಾದದ್ದು. 18 ಮೆಟ್ಟಿಲುಗಳಿಗೆ ಹೆಚ್ಚಿನ ಭಕ್ತಿ, ಗೌರವ ತೋರಲಾಗುತ್ತೆ. ಅರ್ಚಕರು ಮೆಟ್ಟಿಲುಗಳಿಗೆ ಪೂಜೆ ಮಾಡುವಾಗ ದೇವರಿಗೆ ಬೆನ್ನು ತೋರಿಸಲ್ಲ. ಆದರೆ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ದೇವರಿಗೆ ಬೆನ್ನು ತೋರಿಸಿ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೇರಳ ಪೊಲೀಸರು ಮಾಡಿರೋ ಯಡವಟ್ಟು ಶಬರಿಮಲೆ ಸಂಪ್ರದಾಯಕ್ಕೆ ವಿರುದ್ಧವಾದದ್ದು. ಪೊಲೀಸರು 18 ಮೆಟ್ಟಿಲುಗಳ ಮೇಲೆ ದೇವರ ಮುಂಭಾಗದಲ್ಲಿ ಬೆನ್ನು ತೋರಿಸಿ ನಿಂತಿದ್ದರ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಶಬರಿಮಲೆ ದೇವಾಲಯದ ಪವಿತ್ರ ಮೆಟ್ಟಿಲುಗಳ ಮೇಲೆ ನಿಂತು ಸುದೀರ್ಘವಾದ ಸಂಪ್ರದಾಯ, ಆಚಾರ, ವಿಚಾರದ ಉಲ್ಲಂಘನೆ ಮಾಡಲಾಗಿದೆ. ಇದು ದೇವಾಲಯದ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು ಪೊಲೀಸರ ನಡೆಗೆ ಹಿಂದು ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲಾಖೆಗೆ ಸೂಚಿಸಿದ್ದಾರೆ.