ಹೊಸದಿಗಂತ ವರದಿ, ಕುಶಾಲನಗರ:
ಬ್ಯಾಂಕಿನ ಸಾಲ ಕಟ್ಟಲು ಚಿನ್ನ ಅಡವಿಟ್ಟು ಹಣ ಕೊಂಡೊಯ್ಯುತ್ತಿದ್ದ ವ್ಯಕ್ತಿಯೊಬ್ಬರ ಗಮನ ಬೇರೆಡೆಗೆ ಸೆಳೆದ ಖದೀಮರು, 2.09 ಲಕ್ಷ ರೂ.ಗಳನ್ನು ಲಪಟಾಯಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಮೂಲತಃ ಪಿರಿಯಾಪಟ್ಟಣ ತಾಲೂಕು ಬೆಣಗಾಲ್ ವ್ಯಾಪ್ತಿಯ ಆನಂದನಗರದ ಓಹಿಲೇಶ್ (52) ಎಂಬವರು ಹಣ ಕಳೆದುಕೊಂಡ ವ್ಯಕ್ತಿ.
ಕುಶಾಲನಗರದಲ್ಲಿ ಚಿನ್ನ ಅಡವಿಟ್ಟ ಓಹಿಲೇಶ್ ಅವರು ಆತ್ಮೀಯರೊಬ್ಬರನ್ನು ದ್ವಿಚಕ್ರ ವಾಹನದಲ್ಲಿ ಸಾರಿಗೆ ಬಸ್ ನಿಲ್ದಾಣಕ್ಕೆ ಬಿಟ್ಟು, ಬ್ಯಾಂಕಿಗೆ ಹಣ ಕೊಂಡೊಯ್ಯುತ್ತಿದ್ದ ಸಂದರ್ಭ ಹೊಂಚು ಹಾಕಿದ್ದ ಖದೀಮರ ತಂಡ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬಳಿ, ‘ನಿಮ್ಮ ಹಣ ರಸ್ತೆಯಲ್ಲಿ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ. ಓಹಿಲೇಶ್ ಅವರು ಬೈಕ್’ನಿಂದ ಕೆಳಗಿಳಿದು ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಸಂಗ್ರಹಿಸುತ್ತಿದ್ದ ಸಂದರ್ಭ ಬೈಕ್’ನ ಪರ್ಸ್’ನಲ್ಲಿಟ್ಟಿದ್ದ ಪಾಸ್ ಬುಕ್ ಸಹಿತ 2 ಲಕ್ಷ 09 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಸಮೀಪದ ಖಾಸಗಿ ಹೋಟೆಲ್‌ನ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದು, ನಾಲ್ವರ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಖದೀಮರ ಪತ್ತೆಗೆ ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭ ನಗರ, ಗ್ರಾಮಾಂತರ ಠಾಣಾಧಿಕಾರಿಗಳಾದ ಚಂದ್ರಶೇಖರ್, ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ಇದ್ದರು.