ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಸಿಯಿಂದ ಮಥುರಾಗೆ ತೆರಳುತ್ತಿದ್ದ ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಆರು ಮಂದಿ ಅಸ್ವಸ್ಥರಾಗಿರುವ ಘಟನೆ ಭಾನುವಾರದಂದು ನಡೆದಿದೆ.
ಚತ್ತೀಸ್ ಗಢದ ರಾಯ್ ಪುರದಿಂದ ಹೊರಟಿದ್ದ 90 ಪ್ರಯಾಣಿಕರ ಪೈಕಿ ಈ 8 ಮಂದಿ ಇದ್ದರು. ಈ ಪ್ರಯಾಣಿಕರು ಹವಾನಿಯಂತ್ರಿತವಲ್ಲದ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಆರೋಗ್ಯದ ಸ್ಥಿತಿ ಏರುಪೇರಾಗಿರುವ ಕುರಿತು ಆಗ್ರಾದ ರೈಲ್ವೆ ಅಧಿಕಾರಿಗಳಿಗೆ ತುರ್ತು ಕರೆ ಬಂದಿದೆ. ಭಾನುವಾರ ಸಂಜೆ ರೈಲು ಆಗ್ರಾ ಕ್ಯಾಂಟ್ ನಿಲ್ದಾಣಕ್ಕೆ ಆಗಮಿಸಿದ ಬಳಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಆದರೆ ಮೃತರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮೃತ ಪ್ರಯಾಣಿಕರೊಂದಿಗೆ ಇದ್ದ ಹಲವು ಸದಸ್ಯರು ಕೂಡ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಅಸ್ವಸ್ಥಗೊಂಡ 6 ಮಂದಿಯ ಪೈಕಿ 5 ಮಂದಿಯನ್ನು ಆಗ್ರಾದಲ್ಲಿರುವ ರೈಲ್ವೆ ಆಸ್ಪತ್ರೆಗೆ, ಮತ್ತೋರ್ವ ವ್ಯಕ್ತಿಯನ್ನು ಎಸ್ ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಆಗ್ರಾ ವಿಭಾಗದ ಪಿಆರ್ಒ ಮಾಹಿತಿ ನೀಡಿದ್ದಾರೆ.