ಹೊಸದಿಗಂತ ಡಿಜಿಟಲ್ ಡೆಸ್ಕ್
ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬುಧವಾರ 2 ವರ್ಷದ ಹುಲಿಯ ಮೃತದೇಹ ಮರಕ್ಕೆ ಉರುಳು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅರಣ್ಯಾಧಿಕಾರಿಗಳ ಪ್ರಕಾರ, ಮಂಗಳವಾರ ರಾತ್ರಿ ವಿಕ್ರಮಪುರ ಅರಣ್ಯದಲ್ಲಿ ಗಂಡು ಹುಲಿ ಸತ್ತು ಬಿದ್ದಿರುವ ಬಗ್ಗೆ ಎಚ್ಚರಿಕೆ ನೀಡಲಾಯಿತು. ಬುಧವಾರ ಬೆಳಿಗ್ಗೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಹುಲಿಯ ಕುತ್ತಿಗೆಗೆ ಕ್ಲಚ್ ವೈರ್ (ಸಾಮಾನ್ಯವಾಗಿ ವಾಹನಗಳಲ್ಲಿ ಕಂಡುಬರುತ್ತದೆ) ಬಿಗಿದು ಮರಕ್ಕೆ ನೇತಾಡುತ್ತಿರುವುದು ಕಂಡುಬಂದಿದೆ.
ಈ ತಂತಿಯನ್ನು ಸಾಮಾನ್ಯವಾಗಿ ಕಳ್ಳ ಬೇಟೆಗಾರರು ಪ್ರಾಣಿಗಳನ್ನು ಹಿಡಿಯಲು ಬಳಸುತ್ತಾರೆ. ಗ್ರಾಮಸ್ಥರು ಮತ್ತೊಂದು ಪ್ರಾಣಿಯನ್ನು ಹಿಡಿಯಲು ಹಾಕಿದ್ದ ಉರುಳಿಗೆ ಆಕಸ್ಮಿಕವಾಗಿ ಹುಲಿ ಸಿಕ್ಕಿಬಿದ್ದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
“ರಾಜ್ಯ ಹುಲಿ ಸ್ಟ್ರೈಕ್ ಫೋರ್ಸ್ ಜೊತೆಗೆ ಸತ್ನಾದ ಶ್ವಾನದಳವು ಘಟನಾ ಸ್ಥಳಕ್ಕೆ ತಲುಪಿದೆ. ಶ್ವಾನದಳದ ಪ್ರಾಥಮಿಕ ಮೌಲ್ಯಮಾಪನದ ನಂತರ, ಸಾವಿನ ಕಾರಣವನ್ನು ನಾವು ತಿಳಿಯುತ್ತೇವೆ. ನಾವು ಈ ಪ್ರದೇಶದ ಗ್ರಾಮಸ್ಥರು ಮುಂದೆ ಬಂದು ಈ ಘಟನೆ ಕಾರಣವೇನೆಂದು ಹಂಚಿಕೊಳ್ಳಲು ಕೇಳುತ್ತಿದ್ದೇವೆ ಎಂದು ಹಿರಿಯ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಜೀವ್ ಝಾ ಹೇಳಿದ್ದಾರೆ.
ಸಾವಿಗೆ ಕಾರಣವನ್ನು ತಿಳಿಯಲು ಹುಲಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಧ್ಯಪ್ರದೇಶವು ಆರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ, ಅವುಗಳೆಂದರೆ ಕಾನ್ಹಾ, ಬಾಂಧವಗಢ, ಪೆಂಚ್, ಸತ್ಪುರ, ಪನ್ನಾ ಮತ್ತು ಸಂಜಯ್ ದುಬ್ರಿ. ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶವು 3500 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ ಮತ್ತು ವಿಂಧ್ಯಾನ್ ಬೆಟ್ಟಗಳಲ್ಲಿ 15 ರಿಂದ 32 ಹುಲಿಗಳಿಗೆ ನೆಲೆಯಾಗಿದೆ. ರಾಷ್ಟ್ರೀಯ ಉದ್ಯಾನದ ಪ್ರದೇಶವು ಸುಮಾರು 13 ಹಳ್ಳಿಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಕೆಲವು ಸ್ಥಳಾಂತರಗೊಂಡಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ