ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಉಳ್ಳಾಲ ಬಟ್ಟಪಾಡಿಯ ಸಮುದ್ರದಲ್ಲಿ ಸರಕು ಹೊತ್ತು ಬಂದಿದ್ದ ಎಂ.ವಿ. ಪ್ರಿನ್ಸೆಸ್ ಮಿರಾಲ್ ಹೆಸರಿನ ನೌಕೆ ಮುಳುಗಡೆಯಾಗಿ ಬರೋಬ್ಬರಿ 22 ದಿನಗಳು ಕಳೆದಿವೆ. ತೈಲ ಸೋರಿಕೆಯ ಭೀತಿಯಲ್ಲೇ ದಿನಗಳು ಉರುಳುತ್ತಿವೆ. ನೌಕೆಯಿಂದ ತೈಲ ಹೊರತೆಗೆಯಲು ಪೋರಬಂದರಿನಿಂದ ತಂತ್ರಜ್ಞ ನೌಕೆ ಆಗಮಿಸಿದರೂ ಕಡಲಬ್ಬರ ಕಾರಣದಿಂದ ಕಾರ್ಯಾಚರಣೆ ಸಾಧ್ಯವಾಗಿಲ್ಲ.
ಈಗ ಕಡಲಿನ ಅಬ್ಬರ ಜಾಸ್ತಿ ಇರುವುದರಿಂದ ಮುಳುಗಿದ ನೌಕೆಯ ಸಮೀಪಕ್ಕೆ ತೆರಳಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಬಂದರು ಅಧಿಕಾರಿಗಳ ಪ್ರಕಾರ ಬಹುತೇಕ ಜುಲೈ ಅಂತ್ಯ ಅಥವಾ ಆಗಸ್ಟ್ ಪ್ರಥಮ ವಾರದಲ್ಲಿ ತೈಲ ಹೊರ ತೆಗೆಯುವ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಆ ಬಳಿಕವಷ್ಟೆ ನೌಕೆಯನ್ನು ತೆರವುಗೊಳಿಸಲು ಪ್ರಯತ್ನ ನಡೆಯಲಿದೆ.
ಜೂ.23ರಂದು ಮುಳುಗಡೆಯಾಗಿತ್ತು
ಎಂ.ವಿ.ಪ್ರಿನ್ಸಸ್ ಮಿರಾಲ್ ಹೆಸರಿನ ಹಡಗು ಇದೇ ಜೂ.21ರಂದು ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು. ತಕ್ಷಣ ಧಾವಿಸಿದ ಕೋಸ್ಟ್‌ಗಾರ್ಡ್ ತಂಡ ಹಡಗಿನಲ್ಲಿದ್ದ 15 ಮಂದಿ ಸಿರಿಯಾ ಪ್ರಜೆಗಳನ್ನು ರಕ್ಷಿಸಿತ್ತು. ಆದರೆ ನೌಕೆಯ ರಕ್ಷಣೆ ಮಾತ್ರ ಸಾಧ್ಯವಾಗಿರಲಿಲ್ಲ. ಜೂ.23ರಂದು ನೌಕೆ ಮುಳುಗಡೆಯಾಗಿದ್ದು, ತೈಲ ಸೋರಿಕೆಯ ಭೀತಿ ಎದುರಾಗಿದೆ. 8 ಸಾವಿರ ಟನ್ ಸ್ಟೀಲ್ ಕಾಯಿಲ್‌ಗಳನ್ನು ಚೀನಾದಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ಈ ನೌಕೆ ಸಮುದ್ರ ಮಧ್ಯೆ ಅಪಾಯಕ್ಕೆ ಸಿಲುಕಿತ್ತು. ನೌಕೆಯ ತಳಭಾಗದಲ್ಲಿ ರಂಧ್ರ ಉಂಟಾಗಿ ನೀರು ಸತತವಾಗಿ ಒಳಪ್ರವೇಶಿಸಿದ ಪರಿಣಾಮ ಬೋಟ್ ಮುಳುಗಡೆಯಾಗಿತ್ತು.
ಮುಳುಗಿದ ನೌಕೆಗೆ ಕಣ್ಗಾವಲು
ಮುಳುಗಿದ ನೌಕೆಯಿಂದ ತೈಲ ಸೋರಿಕೆ ಬಗ್ಗೆ ದಿನದ 24 ಗಂಟೆಯೂ ಕೋಸ್ಟ್ ಗಾರ್ಡ್ ನೌಕೆ ಹಾಗೂ ಕರಾವಳಿ ಕಾವಲು ಪೊಲೀಸ್ ಬೋಟ್‌ಗಳು ಕಣ್ಗಾವಲು ನಡೆಸುತ್ತಿವೆ. ಪ್ರತಿದಿನಸಂಜೆ ನೌಕಾಯಾನ ಅಧಿಕಾರಿಗಳು ವಿಡಿಯೋ ಕಾನರೆನ್ಸ್ ಮೂಲಕ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾಡಳಿತ, ಕೋಸ್ಟ್‌ಗಾರ್ಡ್, ಕರಾವಳಿ ಕಾಲವು ಪೊಲೀಸ್, ಮರೈನ್ ವಿಭಾಗ, ಬಂದರು ವಿಭಾಗದ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ತೈಲ ಹೊರ ತೆಗೆಯಲು ಎಲ್ಲವೂ ಸನ್ನದ್ಧ ಸ್ಥಿತಿಯಲ್ಲಿದೆ, ಆದರೆ ಹವಾಮಾನ ಮಾತ್ರ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಬಂದರು ಅಧಿಕಾರಿಗಳು.