ಪಾಕಿ ಸೈನ್ಯದ ದೌರ್ಜನ್ಯಗಳಿಂದ ಕಾಶ್ಮೀರಿ ಮಹಿಳೆಯರನ್ನು ರಕ್ಷಿಸಿದ ದಿಟ್ಟ ಮಹಿಳೆ ಕಾಂತ ವಜೀರ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಾಂತಾ ವಜೀರಳ ಹೆಸರನ್ನು ಕಾಶ್ಮೀರಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. 1930ರಲ್ಲಿ ಶ್ರೀನಗರದಲ್ಲಿ ಜನಿಸಿದ ಆಕೆ ಶ್ರೀನಗರದ ಶ್ರೀ ಪ್ರತಾಪ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಂದರ್ಭದಲ್ಲಿ ದೇಶ ವಿಭಜನೆ ಸಂಭವಿಸಿತು. ಭಾರತ- ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಕಾಂತ ವಜೀರ ಭಾರತೀಯ ಮಹಿಳೆಯರ ರಕ್ಷಣೆಗೆಂದು ಸ್ಥಾಪಿತವಾದ ರಾಷ್ಟ್ರೀಯ ಮಿಲಿಟರಿಯ ಮಹಿಳಾ ವಿಭಾಗವಾದ ಮಹಿಳಾ ಸ್ವಯಂ ರಕ್ಷಣಾ ದಳಕ್ಕೆ (WSDC) ಸೇರಿದರು. ಇದೇ ಸಂದರ್ಭದಲ್ಲಿ ಕಾಶ್ಮೀರ ಕರಾಳ ದುರಂತವೊಂದಕ್ಕೆ ಸಾಕ್ಷಿಯಾಯಿತು.
ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಕ್ಬರ್ ಖಾನ್ ನೇತೃತ್ವದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರರು 22 ಅಕ್ಟೋಬರ್ 1947ರ ರಾತ್ರಿ ಭಾರತದ ಗಡಿ ದಾಟಿ ಮುಜಫರಾಬಾದ್ ಪ್ರವೇಶಿಸಿದರು. ಆ ವೇಳೆ ಪಾಕಿಗಳು ನಡೆಸಿದ ವಿಧ್ವಂಸಕ ಕೃತ್ಯ, ಭೀಕರ ಹತ್ಯಾಕಾಂಡಗಳಿಗೆ ಕಾಶ್ಮೀರ ತಲ್ಲಣಿಸಿತು. ಮುಗ್ಧ ಜನರ ಕೊಲೆ, ಅತ್ಯಾಚಾರ, ಲೂಟಿ ಮತ್ತು ಮನೆಗಳಿಗೆ ಬೆಂಕಿಯಿಡುವುದು ಮೊದಲಾದ ಭೀಬತ್ಸ್ಯ ಕೃತ್ಯಗಳಿಂದ ಕಾಶ್ಮೀರ ಕಣಿವೆ ನರಕದ ದ್ವಾರವಾಗಿ ಬದಲಾಯ್ತು. ಈ ಸಂದರ್ಭದಲ್ಲಿ ಜಿಹಾದಿ ಮನಸ್ಥಿತಿಯ ದಾಳಿಕೋರರು ಮಹಿಳೆಯರ ಮೇಲೆ ಅತ್ಯಾಚಾರ, ಆಕ್ರಮಣವನ್ನೆಸಗಿ ಅತ್ಯಂತ ಪೈಶಾಚಿಕವಾಗಿ ನಡೆಸಿಕೊಂಡರು.
ಈ ವೇಳೆ ಕಾಶ್ಮೀರಿಗಳು ತಮ್ಮ ಸಾವಿನ ಭಯ ಬಿಟ್ಟು ಸ್ತ್ರೀಯರ ಗೌರವವನ್ನು ಕಾಪಾಡಿಕೊಳ್ಳಲು ಪ್ರತಿಹೋರಾಟಕ್ಕೆ ಸಜ್ಜಾದರು.  ಮಹಿಳೆಯರ ರಕ್ಷಣೆ ಶ್ರೀನಗರದಲ್ಲಿ ಅತ್ಯಂತ ತುರ್ತಾಗಿ ನಡೆಯಬೇಕಾದ ಕಾರ್ಯವಾಗಿತ್ತು. ಈ ವೇಳೆ ರಾಷ್ಟ್ರೀಯ ಸೇನಾಪಡೆಯ ವಿಶೇಷ ಮಹಿಳಾ ವಿಭಾಗವಾದ ʼಮಹಿಳಾ ಮಿಲಿಷಿಯಾವನ್ನುʼ ಕಾಶ್ಮೀರದಲ್ಲಿ ರಚಿಸಲಾಯಿತು. ದರೋಡೆಕೋರರ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರಿಗೆ ಬಂದೂಕುಗಳ ಬಳಕೆಯ ತರಬೇತಿ ನೀಡುವುದು ಇದರ ಉದ್ದೇಶಿತ ಪಾತ್ರವಾಗಿತ್ತು.
ಮಾತೃಭೂಮಿಗೆ ಸೇವೆ ಸಲ್ಲಿಸುವ ಉತ್ಸಾಹದಿಂದ, ಕಾಶ್ಮೀರದ ದಿಟ್ಟ ಮಗಳು ಕಾಂತಾ ವಜೀರ ಈ ಮಹಿಳಾ ಸೇನೆಗೆ ಸೇರಿ ಬಂದೂಕುಗಳ ಬಳಕೆ ತರಬೇತಿ ಪಡೆದಳು. ಕಾಶ್ಮೀರಿ ಮಹಿಳೆಯರ ಸಾಂಪ್ರದಾಯವಾದಿ ಮನಸ್ಥಿತಿ ಬದಿಗೊತ್ತಿ ಶಸ್ತ್ರಾಸ್ತ್ರಗಳ ಮೂಲಕ ಸ್ತ್ರೀ ಗೌರವ ಮತ್ತು ಘನತೆಯನ್ನು ರಕ್ಷಿಸಿಕೊಳ್ಳುವ ಧ್ಯೇಯ ತೊಟ್ಟಳು. ಕಾಂತಾ ವಜೀರ್ 1947 ರ ಅಕ್ಟೋಬರ್ 27 ರಂದು ಶ್ರೀನಗರಕ್ಕೆ ಬಂದಿಳಿದ ಭಾರತೀಯ ಸೇನೆಯ ಜೊತೆಗೆ ಸೇರಿ ಪಾಕಿ ಅನಾಗರಿಕರ ಆಕ್ರಮಣದಿಂದ ತನ್ನ ಮಾತೃಭೂಮಿಯನ್ನು ರಕ್ಷಿಸಲು ಹೋರಾಟಕ್ಕಿಳಿದಳು. ಆಕೆಯ ನೇತೃತ್ವದ ಸ್ವಯಂ ಸೇವಕರ ತಂಡವು ಸೈನಿಕರಿಗೆ ಎಲ್ಲಿ ದಾಳಿ ನಡೆಸಬೇಕು ಎಂಬ ಸೂಚನೆಗಳನ್ನು ನೀಡುವ ಜೊತೆಗೆ ಪಾಕಿ ಸೈನಿಕರ ಚಲನವಲನದ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿ ನೀಡಿತು. ಈ ಮಾಹಿತಿಗಳನ್ನು ಪಡೆದ ಭಾರತೀಯ ಸೇನೆಯು ಪಾಕಿಗಳನ್ನು ಅಟ್ಟಾಡಿಸಿ ಹೊಡೆದುಹಾಕಿತು.
ಈ ಸಾಹಸ ಕಾರ್ಯದ ಬಳಿಕ ಬಳಿಕ ಕಾಂತಾ ವಜೀರ್ ಕಾಶ್ಮೀರದಲ್ಲಿ ಪ್ರಖ್ಯಾತಿ ಗಳಿಸಿದರು. ʼಮುಕ್ತ ಬೆಟಾಲಿಯನ್ʼ ಎಂದು ಹೆಸರು ಪಡೆದ ಮಹಿಳಾ ಮಿಲಿಟರಿಯ ಮೊದಲ ಬೆಟಾಲಿಯನ್‌ನಲ್ಲಿ ಆಕೆ ಜನಪ್ರಿಯ ಹೆಸರಾದಳು. ಆಕೆ ತನ್ನ ಶಾರ್ಪ್‌ ಶೂಟಿಂಗ್‌ ಸಾಮರ್ಥ್ಯದಿಂದ ಹೆಸರುವಾಸಿಯಾದಳು. ಆ ಬಳಿಕ ಕಾಂತಾ ವಜೀರ್ ನೇತೃತ್ವದ ಮಹಿಳಾ ಸೇನೆಯು ದೇಶ ಇಬ್ಬಾಗದ ವೇಳೆ ಪಾಕಿಸ್ಥಾನಿ ಪ್ರದೇಶಗಳಿಂದ ಅಪಾರ ನೋವುಗಳನ್ನು ಅನುಭವಿಸಿ ಜರ್ಜರಿತರಾಗಿ ಭಾರತದ ಪ್ರದೇಶಗಳತ್ತ ಓಡಿಬಂದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ನೆಲೆ ಕಲ್ಪಿಸಲು ಅಪಾರವಾಗಿ ಶ್ರಮಿಸಿತು. ಈ ಸೈನಿಕ ಪಡೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಥಳಿತಕ್ಕೊಳಗಾದ, ಅತ್ಯಾಚಾರ ಮತ್ತು ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಶುಶ್ರೂಷೆ ಮಾಡಿ ಸಾಂತ್ವನ ಹೇಳುತ್ತಿತ್ತು. ಯುದ್ಧದಲ್ಲಿ ಗಾಯಗೊಂಡ ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಲು ಈ ಪಡೆ ಗುಂಪಾಗಿ ಮಿಲಿಟರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅವರನ್ನು ನೋಡಿಕೊಳ್ಳುತ್ತಿದ್ದರು.
ಈ ಮಹಿಳಾ ಸೇನೆಯು ಕಾಶ್ಮೀರದ ಇತಿಹಾಸದಲ್ಲಿ ಮಹೋನ್ನತ ಪಡೆಯಾಗಿ ಗುರುತಿಸಿಕೊಂಡಿದೆ. ಈ ಪಡೆಯು ಕಾಶ್ಮೀರದ ಪ್ರತಿ ಸಮುದಾಯ ಮತ್ತು ವರ್ಗದ ಮಹಿಳೆಯರಿಗೆ ಪಾಕಿಸ್ತಾನ ಅಸಭ್ಯ ಬುಡಕಟ್ಟು ಜನರನ್ನು ಎದುರಿಸಲು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ಕಲಿಸಿಕೊಟ್ಟಿತು. ಸ್ವಾತಂತ್ರ್ಯೋತ್ತರದ ಬಳಿಕ ಈ ಮಹಿಳಾ ಸೇನೆಯ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಮರೆಯಾಗಿವೆ. ಆದರೆ ಕಾಶ್ಮೀರದಲ್ಲಿ ಮಹಿಳಾ ವಿಮೋಚನೆ ಮತ್ತು ಸಬಲೀಕರಣದ ಪರಿವರ್ತಕ ಪ್ರಕ್ರಿಯೆಗೆ ಚಾಲನೆ ನೀಡಿದ ಈ ಸೇನೆ, ಕಾಂತಾ ವಜೀರಗಳಂತ ದಿಟ್ಟ ಮಹಿಳೆಯನ್ನು ಕಾಶ್ಮೀರಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ದುರಂತವೇನು ಗೊತ್ತೇ? ಕಾಶ್ಮೀರಿ ಮಹಿಳೆಯ ಗೌರವ ರಕ್ಷಣೆಗೆ ಇಷ್ಟೆಲ್ಲಾ ಶ್ರಮಿಸಿದ ಕಾಂತ ವಜೀರ,  1990 ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಜಿಹಾದಿಗಳು ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಸಿಲುಕಿ ತನ್ನ ಕುಟುಂಬದೊಂದಿಗೆ ದೆಹಲಿಗೆ ಪಲಾಯನ ಮಾಡಿ ಜೀವ ಉಳಿಸಿಕೊಳ್ಳಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!