ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾನು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಾಗಿದೆ. ಅಲ್ಲಿಯವರೆಗೂ ನಾನು ವಿರಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ,ಅಭಿವೃದ್ಧಿ ಹೊಂದಿದ ಭಾರತದ ಸಾಮೂಹಿಕ ಗುರಿ ಸಾಕಾರಗೊಳ್ಳುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಈ 23 ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ನಾನು ಜನರ ಸೇವೆಯಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ದಣಿವರಿಯಿಲ್ಲದೆ ಕೆಲಸ ಮಾಡುತ್ತೇನೆ ಎಂದು ನನ್ನ ದೇಶದ ಜನರಿಗೆ ಭರವಸೆ ನೀಡುತ್ತೇನೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಕ್ಟೋಬರ್ 7, 2001ರಂದು ಮೋದಿ ಗುಜರಾತಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಈ ಬಗ್ಗೆ ನೆನಪಿಸಿಕೊಂಡ ಮೋದಿ, ಒಬ್ಬ ವಿನಮ್ರ ಕಾರ್ಯಕರ್ತನಿಗೆ ಆ ಸ್ಥಾನವನ್ನು ನೀಡಿದ್ದು ತಮ್ಮ ಪಕ್ಷದ ಹಿರಿಮೆ. ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ ಗುಜರಾತ್ ರಾಜ್ಯವು ಹಲವಾರು ಸವಾಲುಗಳನ್ನು ಎದುರಿಸುತ್ತಿತ್ತು ಎಂದು ಅವರು ಹೇಳಿದರು
2001ರ ಕಚ್ ಭೂಕಂಪ, ಸೂಪರ್ ಸೈಕ್ಲೋನ್, ಭೀಕರ ಬರಗಾಲ, ಕೋಮುವಾದ ಮತ್ತು ಜಾತೀಯತೆಯಂತಹ ಹಲವು ದಶಕಗಳ ಕಾಂಗ್ರೆಸ್ ದುರಾಡಳಿತದ ಪರಂಪರೆಯಿಂದ ಗುಜರಾತ್ ನಲುಗಿತ್ತು. ಜನ ಶಕ್ತಿಯಿಂದ ನಡೆಸಲ್ಪಡುವ ಮೂಲಕ ನಾವು ಗುಜರಾತ್ ಅನ್ನು ಪುನರ್ ನಿರ್ಮಿಸಿದ್ದೇವೆ. ಕೃಷಿಯಂತಹ ಕ್ಷೇತ್ರಗಳಲ್ಲಿಯೂ ಸಹ ಅದನ್ನು ಪ್ರಗತಿಯ ಹೊಸ ಎತ್ತರಕ್ಕೆ ಮುನ್ನಡೆಸಿದ್ದೇವೆ ಎಂದು ಹೇಳಿದ್ದಾರೆ.
13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನನ್ನನ್ನು 2014ರಲ್ಲಿ, ಭಾರತದ ಜನರು ಬಿಜೆಪಿಗೆ ದಾಖಲೆಯ ಜನಾದೇಶದೊಂದಿಗೆ ಆಶೀರ್ವದಿಸಿದರು. ನನಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟರು. ಇದು ಐತಿಹಾಸಿಕ ಕ್ಷಣವಾಗಿತ್ತು. ಆ ಬಾರಿ 30 ವರ್ಷಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಪೂರ್ಣ ಬಹುಮತವನ್ನು ಪಡೆದುಕೊಂಡಿತು ಎಂದು ಸಾಧನೆಯ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.
ಕಳೆದ ದಶಕದಲ್ಲಿ ನಮ್ಮ ರಾಷ್ಟ್ರವು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. 25 ಕೋಟಿಗೂ ಹೆಚ್ಚು ಜನರು ಬಡತನದ ಕಪಿಮುಷ್ಠಿಯಿಂದ ಮುಕ್ತರಾಗಿದ್ದಾರೆ. ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶೇಷವಾಗಿ ನಮ್ಮ ಎಂಎಸ್ಎಂಇಗಳು, ಸ್ಟಾರ್ಟ್ಅಪ್ಗಳ ವಲಯ ಮತ್ತು ಹೆಚ್ಚಿನವುಗಳಿಗೆ ಸಹಾಯ ಮಾಡಿದೆ. ನಮ್ಮ ಕಷ್ಟಪಟ್ಟು ದುಡಿಯುವ ರೈತರು, ನಾರಿ ಶಕ್ತಿ, ಯುವ ಶಕ್ತಿ, ಮತ್ತು ಬಡವರು ಹಾಗೂ ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಮೃದ್ಧಿಯ ಹೊಸ ಮಾರ್ಗಗಳು ತೆರೆದಿವೆ ಎಂದು ಅವರು ಹೇಳಿದರು.
ಜಗತ್ತು ನಮ್ಮೊಂದಿಗೆ ತೊಡಗಿಸಿಕೊಳ್ಳಲು, ನಮ್ಮ ಜನರಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ಯಶಸ್ಸಿನ ಭಾಗವಾಗಲು ಉತ್ಸುಕವಾಗಿದೆ ಎಂದು ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಅಕ್ಟೋಬರ್ 7, 2001ರಂದು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2014ರಲ್ಲಿ ಪ್ರಧಾನಿಯಾಗುವ ಮೊದಲು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ನಿರ್ವಹಿಸಿದ್ದರು. ಅವರು ಈ ಬಾರಿ ಜೂನ್ನಲ್ಲಿ ಸತತ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.