24,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ: ಸಚಿವ ಸೋಮಶೇಖರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರಕಾರ ಜನವರಿ ಅಂತ್ಯದ ವೇಳೆಗೆ 22 ಲಕ್ಷ ರೈತರಿಗೆ 16,500 ಕೋಟಿ ರೂ.ಸಾಲ ವಿತರಿಸಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2022-23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲ ಅರ್ಹ ರೈತರಿಗೆ ಸಾಲ ವಿತರಿಸಿ ನಿಗದಿತ ಗುರಿ ಸಾಧಿಸಲಾಗುವುದು ಎಂದರು.
‘ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೆ ಗುರಿ ನಿಗದಿ ಪಡಿಸಲಾಗಿದ್ದು, ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಡಿಸಿಸಿ ಬ್ಯಾಂಕ್‌ಗಳಿಗೆ ಸ್ವತಃ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ . ಸರ್ಕಾರ ನಿಗದಿ ಪಡಿಸಿರುವ ಸಾಲದ ಗುರಿ ತಲುಪಬೇಕು. ಸಾಲ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಅರ್ಹ ರೈತರಿಗೆಲ್ಲರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವಂತೆ ಸೂಚಿಸಲಾಗಿದೆೞಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅತ್ಯುತ್ತಮ ಸಾಧನೆ

ಎಸ್‌ಸಿಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ 1.75 ಲಕ್ಷ ರೈತರಿಗೆ 2300 ಕೋಟಿ ರೂ. ಸಾಲ ವಿತರಿಸುವ ಗುರಿ ನೀಡಲಾಗಿದ್ದು, ಈಗಾಗಲೇ 2024 ಕೋಟಿ ರೂ.ಸಾಲ ವಿತರಣೆಯಾಗಿದೆ. ಮಾರ್ಚ್ ಅಂತ್ಯಕ್ಕೆ ಗುರಿ ಸಾಧನೆ ಮಾಡಲಾಗುವುದೆಂದು ಬ್ಯಾಂಕಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಧ್ಯಮಾವದಿ ಹಾಗೂ ದೀರ್ಘಾವಧಿ ಕೃಷಿ ಸಾಲ, ಪಶುಸಂಗೋಪನೆ, ಮೀನುಗಾರಿಕೆ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಸಹಿತ ವಿವಿಧ ಉದ್ದೇಶಗಳಿಗೆ ಸಾಲ ವಿತರಿಸಲಾಗಿದೆ. ಕೃಷಿ ಸಾಲ ಶೇ.100 ವಸೂಲಿಯಾಗಿದೆ. ಇತರ ಉದ್ದೇಶದ ಸಾಲ ಕೂಡಾ ಶೇ.92ರಷ್ಟು ವಸೂಲಿಯಾಗಿದೆ. ರೈತರಿಂದ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಿತವಾಗಿ ಸಾಲ ವಿತರಿಸಿದ್ದು , ಅತ್ಯುತ್ತಮ ಸಾಧನೆ ಮಾಡಿದೆ ಎಂದು ಸಚಿವರು ಶ್ಲಾಘಿಸಿದರು.

ಹಣ ಬಿಡುಗಡೆಗೆ ಮನವಿ

ರೈತರ ಸಾಲಮನ್ನಾ ಸಂಬಂಧಿಸಿ ಸರ್ಕಾರದಿಂದ ಸಹಕಾರಿ ಬ್ಯಾಂಕ್‌ಗಳಿಗೆ 157 ಕೋಟಿ ರೂ. ಪಾವತಿಗೆ ಬಾಕಿ ಇದೆ. ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದ್ದು ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇಡೀ ದೇಶದಲ್ಲಿ ಮಾದರಿ ಬೈಲಾ ಅಳವಡಿಸಲು ಸೂಚಿಸಿದೆ. ಬೈಲಾದ ಅಂಶಗಳು ಇಂಗ್ಲೀಷ್‌ನಲ್ಲಿದ್ದು ಕನ್ನಡಕ್ಕೆ ಭಾಷಾಂತಾರ ಮಾಡಲಾಗಿದೆ. ಮಾದರಿ ಬೈಲಾ ಶೀಘ್ರ ಅಳವಡಿಕೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್.ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎಂ.ವಾದಿರಾಜ ಶೆಟ್ಟಿ, ಜೈರಾಜ್ ಬಿ. ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭm, ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ.ಜಿ.ಉಮೇಶ್,ಸಹಾಯಕ ನಿಬಂಧಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು.
ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಬ್ಯಾಂಕಿನ ಅಧ್ಯಕ್ಷ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸನ್ಮಾನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!