ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣ: ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಗೋವಾ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ಗೋವಾ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ. ಹರಿಯಾಣದ ಹಿಸಾರ್‌ನ ಬಿಜೆಪಿ ನಾಯಕ ಫೋಗಟ್ (43) ಕಳೆದ ತಿಂಗಳು ಗೋವಾದಲ್ಲಿ ಸಾವನ್ನಪ್ಪಿದ್ದು, ಆಕೆಯ ಸಾವನ್ನು ಕೊಲೆ ಎಂದು ಪರಿಗಣಿಸಲಾಗಿದೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾವಂತ್, ಗೋವಾ ಪೊಲೀಸರು ಪ್ರಕರಣದ ಬಗ್ಗೆ ಅತ್ಯಂತ ಉತ್ತಮ ತನಿಖೆ ಮಾಡಿದ್ದಾರೆ ಮತ್ತು ಕೆಲವು ಸುಳಿವುಗಳನ್ನು ಸಹ ಪಡೆದಿದ್ದಾರೆ. ಆದರೆ ಹರಿಯಾಣದ ಜನರು ಮತ್ತು ಸೋನಾಲಿ ಫೋಗಟ್ ಅವರ ಮಗಳ ಬೇಡಿಕೆಯಿಂದಾಗಿ, ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಾವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯಕ್ಕೆ ಖುದ್ದಾಗಿ ಪತ್ರ ಬರೆಯುತ್ತೇನೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಗಟ್‌ನ ಇಬ್ಬರು ಸಹಾಯಕರು ಸೇರಿದಂತೆ ಐವರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಆಕೆಯ ಇಬ್ಬರು ಸಹಾಯಕರ ವಿರುದ್ಧ ಪೊಲೀಸರು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಸೋನಾಲಿ ಫೋಗಟ್  ಕುಟುಂಬಸ್ಥರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.  ಅವರ ಕುಟುಂಬದ ಸದಸ್ಯರು ಗೋವಾ ಪೊಲೀಸ್ ತನಿಖೆಯಿಂದ ಅತೃಪ್ತರಾಗಿದ್ದು, ಆಕೆಯ ಸಾವಿನ ಕುರಿತು ಸಿಬಿಐ ತನಿಖೆಗೆ ಪಟ್ಟುಹಿಡಿದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಹರಿಯಾಣದ ಹಿಸಾರ್, ರೋಹ್ಟಕ್ ಮತ್ತು ಗುರುಗ್ರಾಮ್‌ಗೂ ಭೇಟಿ ನೀಡಿದ್ದಾರೆ. ಗೋವಾ ಸರ್ಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡದಿದ್ದಲ್ಲಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಫೋಗಟ್ ಅವರ ಕೆಲವು ಕುಟುಂಬ ಸದಸ್ಯರು ಈ ಹಿಂದೆ ಹೇಳಿದ್ದರು.
ಫೋಗಟ್ ಮತ್ತು ಅವರ ಸಹಾಯಕರು ಆಗಸ್ಟ್ 22 ಮತ್ತು 23 ರ ಮಧ್ಯರಾತ್ರಿ ಗೋವಾದ ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಮಾಜಿ ಟಿಕ್ ಟಾಕ್ ತಾರೆ ಮತ್ತು ರಿಯಾಲಿಟಿ ಟಿವಿ ಶೋ ‘ಬಿಗ್ ಬಾಸ್’ ನಲ್ಲಿ ಸ್ಪರ್ಧಿಯಾಗಿದ್ದ ಫೋಗಟ್ ಅವರನ್ನು ಆ ಬಳಿಕ ಉತ್ತರ ಗೋವಾದ ಆಸ್ಪತ್ರೆಗೆ ಕರೆತರಲಾಗಿತ್ತು. ಆ ವೇಳೆ ಅವರು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರೋಪಿ ಸುಧೀರ್ ಸಂಗ್ವಾನ್, ಮತ್ತೊಬ್ಬ ಸಹಾಯಕ ಸುಖ್ವಿಂದರ್ ಸಿಂಗ್ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!