ಮಳೆಯಿಂದ ರಾಜ್ಯದಲ್ಲಿ 25 ಜನರು ಸಾವು: ಮನೆ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ 1.20 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಆಗಿರುವ ಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಅವರು ವಿಡಿಯೋ ಸಂವಾದ ನಡೆಸಿ, ಮಾಹಿತಿ ಪಡೆದು, ಪರಿಹಾರ ಕಾರ್ಯಗಳ ಶೀಘ್ರ ಅನುಷ್ಠಾನಕ್ಕೆ ಸೂಚನೆ ನೀಡಿದರು.

ಈ ವೇಳೆ ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಯಮಾವಳಿ ಪ್ರಕಾರ ತಕ್ಷಣ ಪರಿಹಾರ ಒದಗಿಸಿ ಜನರಿಗೆ ಸಾಂತ್ವಾನ ನೀಡುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಹಿಂಗಾರು ಅವಧಿಯಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ಇತ್ತು. ಈ ಬಾರಿ ಜಲವಿದ್ಯುತ್‌ ಉತ್ಪಾದನೆಗೆ ಉತ್ತಮ ಪ್ರಮಾಣದ ನೀರು ಲಭ್ಯವಿದೆ. ಕಾವೇರಿ ಕಣಿವೆ ಹಾಗೂ ಕೃಷ್ಣಾ ಕಣಿವೆಯಲ್ಲೂ ಉತ್ತಮ ನೀರು ಸಂಗ್ರಹವಿದೆ. ಕುಡಿಯುವ ನೀರಿಗೆ ಸಾಕಷ್ಟು ನೀರನ್ನು ಇಟ್ಟುಕೊಂಡು ನೀರಾವರಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ 19 ದೊಡ್ಡ ಜಾನುವಾರುಗಳು, 66 ಸಣ್ಣ ಜಾನುವಾರುಗಳು ಸಾವಿಗೀಡಾಗಿವೆ. ಎಸ್‌ಡಿಆರ್‌ಎಫ್‌ ನಿಯಮಾನುಸಾರ ದೊಡ್ಡ ಜಾನುವಾರುಗಳಿಗೆ ಒಟ್ಟು ರೂ. 6.84 ಲಕ್ಷ, ಸಣ್ಣ ಜಾನುವಾರುಗಳಿಗೆ ಒಟ್ಟು ರೂ. 2.8 ಲಕ್ಷ ಸೇರಿದಂತೆ ಒಟ್ಟು ರೂ. 9.6 ಲಕ್ಷ ಪರಿಹಾರ ಪಾವತಿಸಲಾಗಿದೆ.

ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದಾಗಿ 84ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2077ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆ ಹಾನಿಗೆ 1.20ಲಕ್ಷ ರೂ ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ ರೂ.50 ಸಾವಿರದವರೆಗೆ ಪರಿಹಾರ ಒದಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಇನ್ನು ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಜಂಟಿ ಸಮೀಕ್ಷೆ ಕಾರ್ಯವನ್ನು ಒಂದು ವಾರದ ಒಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಹಾನಿ ಮತ್ತು ಪ್ರಾಣ ಹಾನಿ ಪ್ರಕರಣಗಳಲ್ಲಿ 48 ಗಂಟೆಗಳ ಒಳಗಾಗಿ ಪರಿಹಾರವನ್ನು ಒದಗಿಸುವಂತೆ ತಿಳಿಸಲಾಗಿದೆ.ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!