ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ತತ್ ಕ್ಷಣವೇ 26 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 40 ಕೋಟಿ ರೂ. ಹಣ ಹಂಚಿಕೆ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಶಾಸಕರುಗಳಾದ ಸಿ.ಪಿ. ಯೋಗೇಶ್ವರ್, ಇಕ್ಬಾಲ್ ಹುಸೇನ್ ಅವರೊಂದಿಗೆ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆನೆಗಳು ನಾಡಿಗೆ ಬಂದು ಬೆಳೆಹಾನಿ, ಜೀವಹಾನಿ ಮಾಡುತ್ತಿದ್ದು, ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ತಾವು ಸಚಿವರಾದ ತರುವಾಯ ರಾಮನಗರ ಜಿಲ್ಲೆಗೆ ಒಟ್ಟು 35 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು ಮಾಡಿದ್ದು, ಈಗಾಗಲೇ 25 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಭದ್ರಾ ಅಭಯಾರಣ್ಯದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ನಿರ್ಮಿಸುವುದಾಗಿ ಘೋಷಿಸಿರುವ ರೀತಿಯಲ್ಲೇ, ರಾಮನಗರ ಜಿಲ್ಲೆಯಲ್ಲಿ ಕೂಡ ಮುತ್ತತ್ತಿ ಅಥವಾ ನೇರಳಹಟ್ಟಿ ಬಳಿ ಆನೆ ವಿಹಾರ ಧಾಮ ಸ್ಥಾಪಿಸುವ ಮೂಲಕ ರಾತ್ರಿಯ ವೇಳೆ ನಾಡಿಗೆ ಬಂದು ಬೆಳೆ ತಿಂದು ರಾತ್ರಿ ಕಾಡಿಗೆ ಹೋಗುವ ಆನೆಗಳ ಹಾವಳಿ ತಪ್ಪಿಸಬೇಕು ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಈಶ್ವರ ಖಂಡ್ರೆ, ಈ ಸಂಬಂಧ ಪರಿಶೀಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.
ಕಾಡಿನಲ್ಲಿ ನೀರು, ಆಹಾರದ ಖಾತ್ರಿ
ಅರಣ್ಯ ಪ್ರದೇಶದೊಳಗೆ ಆನೆ ಸೇರಿದಂತೆ ಎಲ್ಲ ವನ್ಯಜೀವಿಗಳಿಗೆ ಕುಡಿಯುವ ನೀರು ಮತ್ತು ಆಹಾರದ ಲಭ್ಯತೆಯ ಖಾತ್ರಿ ಪಡಿಸಲು ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು. ಬೇಸಿಗೆಯಲ್ಲಿ ಕಾವೇರಿ ವನ್ಯಜೀವಿ ಧಾಮ ಸೇರಿದಂತೆ ಜಿಲ್ಲೆಯ ಎಲ್ಲ ಅರಣ್ಯಗಳಲ್ಲಿರುವ ನೀರು ಗುಂಡಿಗಳಲ್ಲಿ ನೀರು ಇರುವಂತೆ ಕ್ರಮ ವಹಿಸಬೇಕು. ಅಗತ್ಯ ಇರುವ ಕಡೆ ಕೊಳವೆಬಾವಿಗಳಿಗೆ ಸೌರ ಪಂಪ್ ಸೆಟ್ ಅಳವಡಿಸಿ ನಿರಂತರವಾಗಿ ನೀರು ಹಾಯಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.