ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿಯುವ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಗರದ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂ ಆರ್ ಡಿ ಎ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು, ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
2014 ರಿಂದ ಇಲ್ಲಿಯ ತನಕ ಅಂದರೆ 11 ವರ್ಷಗಳಿಂದ ನಗರದಲ್ಲಿ ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬಿಡ್ಬ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿಯಾಗುತ್ತಿತ್ತು. ಈ ಬಾರಿ 75 ಕೋಟಿಯಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ ಎಂದರು.
ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ನಗರದ ಎಲ್ಲಾ ಶಾಸಕರ ಬಳಿ ಹೋಗಿ ಮಂಡಳಿಯವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಜಾಲ ವಿಸ್ತರಣೆ ಮಾಡುವ ಸಲುವಾಗಿ ಅನೇಕ ಬ್ಯಾಂಕ್ ಗಳ ಬಳಿ ಸಾಲ ಕೇಳಲೂ ಆಗುತ್ತಿಲ್ಲ. ಬ್ಯಾಂಕ್ ಅವರು ಮಂಡಳಿ ನಷ್ಟದಲ್ಲಿದೆ ನಾವು ಸಹಾಯ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಹಣ ನೀಡುತ್ತಿರುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕು ಎಂದಾದರೆ ಹಣ ವಾಪಸಾತಿಯ ಬಗ್ಗೆ ಭರವಸೆ ನೀಡಿ ಎಂದು ತಿಳಿಸುತ್ತಿದ್ದಾರೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲರನ್ನು ಒಳಗೊಂಡಿರುವ ತೆರಿಗೆ ಪಾವತಿಗೆ ವ್ಯವಸ್ಥೆ ರೂಪಿಸಿರುವ ಮಾದರಿಯಲ್ಲಿ ನೀರಿನ ಸಂಪರ್ಕ, ಬಳಕೆಯಾಗುವ ನೀರಿನ ಬಗ್ಗೆ ನಿಖರ ಮಾಹಿತಿ ಸಿಗಬೇಕು ಎಂದು ಯೋಜನೆ ರೂಪಿಸಲಾಗಿದೆ. ಬಡವರು, ಶ್ರೀಮಂತರು, ವಸತಿ ಸಮುಚ್ಚಯಗಳು ಹೀಗೆ ಪ್ರತಿಯೊಂದು ಲೆಕ್ಕವೂ ಸಿಗಬೇಕು. ಸಾರ್ವಜನಿಕರು ಕೊಂಚವಾದರೂ ಹಣ ಪಾವತಿ ಮಾಡಿ ನೀರಿನ ಸಂಪರ್ಕ ಪಡೆಯಬೇಕು. ಅಕ್ರಮ ಸಂಪರ್ಕ ಪಡೆದಿರುವವರು ಸಕ್ರಮ ಮಾಡಿಕೊಳ್ಳಬೇಕು. ಬಿಡ್ಬ್ಯೂ ಎಸ್ ಎಸ್ ಬಿ ಉಳಿವಿಗೆ ಮತ್ತು ಎಲ್ಲರಿಗೂ ನೀರನ್ನು ಒದಗಿಸಿಕೊಡಲು ನಾವು ತೀರ್ಮಾನ ಮಾಡಬೇಕಿದೆ ಎಂದು ಮನವಿ ಮಾಡಿದರು.
15 ಸಾವಿರ ನೂತನ ಸಂಪರ್ಕ
ಕಾವೇರಿ 5 ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಇದುವರೆಗೂ ಸುಮಾರು 15 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಇನ್ನೂ 20 ಸಾವಿರದಷ್ಟು ನೀರಿನ ಸಂಪರ್ಕಗಳನ್ನು ನೀಡಬೇಕಾಗಿದೆ. ಅಲ್ಲದೇ ಸಾಕಷ್ಟು ವಸತಿ ಸಮುಚ್ಚಯಗಳು ನೀರಿನ ಸಂಪರ್ಕಗಳನ್ನು ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ಕಡ್ಡಾಯವಾಗಿ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಸಾರ್ವಜನಿಕರ ಉಪಯೋಗಕ್ಕೆ ಎಂದು ಸರ್ಕಾರ ಹಣ ಖರ್ಚು ಮಾಡಿದೆ. ಅನೇಕ ಕಡೆ ಸೇವಾ ಶುಲ್ಕ, ಠೇವಣಿ ಶುಲ್ಕ ಸೇರಿದಂತೆ ಇತರೇ ಶುಲ್ಕಗಳನ್ನು ಕಟ್ಟಬೇಕು ಎಂದು ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಇದನ್ನು ತಡೆಯಲು ಸರ್ಕಾರ ಈಗಾಗಲೇ ಕಠಿಣ ಕ್ರಮ ತೆಗೆದುಕೊಂಡಿದೆ. ಪ್ರತಿಯೊಂದು ಮನೆ, ವಸತಿ ಸಮುಚ್ಚಯಕ್ಕೆ ಹೋಗಿ ಜನರಿಗೆ ತಿಳುವಳಿಕೆ ಮೂಡಿಸಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಮನವಿ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.