ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಅನೇಕರು ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 26 ಮಂದಿಗೆ ಗಾಯಗಳಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 22 ಮಂದಿ, ಮಿಂಟೋ ಆಸ್ಪತ್ರೆಯಲ್ಲಿ ನಾಲ್ವರು ಚಿಕ್ಸಿತ್ಸೆ ಪಡೆಯುತ್ತಿದ್ದಾರೆ. 22 ಜನರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಾರಾಯಣ ನೇತ್ರಾಲಯ ಮುಖ್ಯಸ್ಥ ರೋಹಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇನ್ನು ಮಿಂಟೋ ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಸರ್ಕಾರ ಪಟಾಕಿ ನಿಷೇಧ ಹೇರಿದ್ದರೂ ನಗರದ ಹಲವೆಡೆ ಬೆಂಗಳೂರು ನಿವಾಸಿಗಳು ಪಟಾಕಿ ಖರೀದಿಸಿ ಸಿಡಿಸಿದ್ದಾರೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸರ್ಕಾರ ಜನರಿಗೆ ಸೂಚನೆ ನೀಡಿತ್ತು. ಅಲ್ಲದೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸುವಂತೆ ಸೂಚಿಸಿದ್ದಾರೆ. ಆದರೆ, ನಗರದ ಹಲವೆಡೆ ಭಾನುವಾರ ತಡರಾತ್ರಿವರೆಗೂ ಜನರು ಪಟಾಕಿ ಸಿಡಿಸುವುದನ್ನು ಮುಂದುವರಿಸಿದ್ದಾರೆ. ಹಬ್ಬದ ವೇಳೆ ಪಟಾಕಿ ಅವಘಡಗಳ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆವಹಿಸಿದರೂ ಈ ರೀತಿಯ ಘಟನೆಗಳು ಮರುಕಳಿಸುವುದು ಹೆಚ್ಚು ಆತಂಕ ಮೂಡಿಸುತ್ತವೆ.