ಉದಯನಿಧಿ ಹೇಳಿಕೆ ಖಂಡಿಸಿ ಭಾರತದ 262 ಗಣ್ಯರಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸನಾತನ ಧರ್ಮದ ಕುರಿತಾಗಿ ಹೇಳಿಕೆ ನೀಡಿರುವ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಾಗಬೇಕು ಎಂದು ಒತ್ತಾಯಿಸಿ ನಿವೃತ್ತ ಐಎಎಸ್‌ ಅಧಿಕಾರಿಗಳು ಸೇರಿದಂತೆ 262 ಗಣ್ಯ ವ್ಯಕ್ತಿಗಳ ಸಮೂಹವು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.

ಭಾನುವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿ, ಸನಾತನ ಧರ್ಮವನ್ನು ಕರೋನವೈರಸ್, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿದ್ದರು. ಅಲ್ಲದೆ ಅದನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಅಧಿಕಾರಿಗಳನ್ನೊಳಗೊಂಡ ಗಣ್ಯವ್ಯಕ್ತಿಗಳ ಗುಂಪು, ಉದಯನಿಧಿ ಸ್ಟಾಲಿನ್ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಾಗುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ.

“ಇತ್ತೀಚಿನ ಶಹೀನ್ ಅಬ್ದುಲ್ಲ ವರ್ಸಸ್ ಯೂನಿಯನ್ ಆಫ್ ಇಂಡಿಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ, ದ್ವೇಷದ ಭಾಷಣಗಳ ಸಂಬಂಧದಲ್ಲಿ ರಾಜ್ಯ ಸರ್ಕಾರವು ಯಾವುದೇ ದೂರುಗಳಿಗೆ ಕಾಯದೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಉದಯನಿಧಿ ಸ್ಟಾಲಿನ್ ವಿಚಾರದಲ್ಲಿ ಇದನ್ನು ಪಾಲಿಸದಿರುವ ತಮಿಳುನಾಡು ಸರ್ಕಾರವು ನ್ಯಾಯಂಗ ನಿಂದನೆ ಎಸಗಿದಂತಾಗಿದೆ. ಸುಪ್ರೀಂಕೋರ್ಟ್ ಇತ್ತೀಚಿನ ವರ್ಷಗಳಲ್ಲಿ ದ್ವೇಷ ಭಾಷಣದ ವಿದ್ಯಮಾನಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು ಎಂಬುದನ್ನೂ ನೆನಪಿಸಿಕೊಳ್ಳಬೇಕು” ಎಂಬುದು ಪತ್ರದ ಸಾರಾಂಶವಾಗಿದೆ.

ಉದಯನಿಧಿಯವರ ಹೇಳಿಕೆ ಸಮುದಾಯಗಳ ನಡುವೆ ಸಾಮರಸ್ಯ ಕದಡುವಂತಿದೆ. ಅಲ್ಲದೇ ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸುವಂತಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!