Tuesday, March 28, 2023

Latest Posts

ನೇರ ಹಣ ವರ್ಗಾವಣೆಯಿಂದ ಸರ್ಕಾರಿ ಬೊಕ್ಕಸಕ್ಕೆ ಇಷ್ಟು ಹಣ ಉಳಿತಾಯವಾಗಿದೆಯಂತೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗಲೆಂದು ಜಾರಿಗೆ ತರಲಾದ ನೇರ ಹಣ ವರ್ಗಾವಣೆ (DBT) ವಿಧಾನದಿಂದ ಸರ್ಕಾರಕ್ಕೆ ಬರೋಬ್ಬರಿ 27 ಬಿಲಿಯನ್‌ ಡಾಲರುಗಳಷ್ಟು ಹಣ ಉಳಿತಾಯವಾಗಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಹೇಳಿದ್ದಾರೆ.

ಹೈದ್ರಾಬಾದ್‌ನಲ್ಲಿ ನಡೆದ ಜಾಗತಿಕ ಹಣಕಾಸು ಸಹಭಾಗಿತ್ವದ ಎರಡನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು “ಭಾರತವು ಸರ್ಕಾರಿ ಯೋಜನೆಗಳ ಅನುಷ್ಟಾನದಲ್ಲಿ ಜಾರಿಗೆ ತಂದ ನೇರ ಹಣವರ್ಗಾವಣೆ ವಿಧಾನವು ಸರ್ಕಾರಿ ಯೋಜನೆಗಳಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಈ ವಿಧಾನದಿಂದಾಗಿ ಸರ್ಕಾರಿ ಯೋಜನೆಗಳಲ್ಲಿ 27 ಬಿಲಿಯನ್‌ ಡಾಲರ್‌ ಹಣಕಾಸು ಉಳಿತಾಯವಾಗಿದೆ” ಎಂದು ಹೇಳಿದ್ದಾರೆ.

“ಭಾರತದಿಂದ ರಚಿಸಲ್ಪಟ್ಟ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು (DPI) ಸರ್ಕಾರಿ ಯೋಜನೆಗಳ ಅನುಷ್ಟಾನದ ಚಿತ್ರಣವನ್ನೇ ಬದಲಾಯಿಸಿದ್ದು ಜನಸ್ನೇಹಿ ವಿಧಾನವಾಗಿ ಹೊರಹೊಮ್ಮಿದೆ. ಸರ್ಕಾರದಿಂದ ಫಲಾನುಭವಿಗೆ ತ್ವರಿತ ಹಣ ವರ್ಗಾವಣೆಗೆ ಇದು ಸಹಕಾರಿಯಾಗುತ್ತದೆ. ಭ್ರಷ್ಟಾಚಾರ, ಸೋರಿಕೆಗಳು ಮತ್ತು ನಕಲಿ ಫಲಾನುಭವಿಗಳನ್ನು ತೆಗೆದುಹಾಕಲು ಸಹಾಯಕವಾಗಿದೆ. ಭಾರತದ ಪಾಲಿಗೆ ಇದು ವರವಾಗಿ ಪರಿಣಮಿಸಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಹಿಂಜರಿತದಿಂದ ಹೊಡೆತ ಅನುಭವಿಸುತ್ತಿರುವ ಜಿ 20 ದೇಶಗಳಿಗೂ ಈ ಯೋಜನೆ ಸಹಾಯಕವಾಗಲಿದ್ದು ಜಾಗತಿಕ ದಕ್ಷಿಣದ ಜನರನ್ನು ಸಬಲೀಕರಣಗೊಳಿಸಲು ಭಾರತವು ತನ್ನ ತಾಂತ್ರಿಕ ಸಾಮರ್ಥ್ಯಗಳು ಮತ್ತು ಜ್ಞಾನ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಸಿದ್ಧವಾಗಿದೆ ” ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!