ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನ ಸೇಲಂನ ಯುವಕನೊಬ್ಬ ತನ್ನ ಕನಸಿನ ಬೈಕ್ ಖರೀದಿಸಿದ್ದಾನೆ. ಅದರಲ್ಲೇನು ವಿಶೇಷ ಅಂತೀರಾ? ವಿಶೇಷತೆ ಇರುವುದು ಆತ ತಾನು ಇಷ್ಟಪಟ್ಟಿದ್ದನ್ನು ಸಾಧಿಸಲು ಅನುಸರಿಸಿದ ಮಾರ್ಗದಲ್ಲಿ. ಮೂರು ವರ್ಷಗಳ ಕಾಲ ಪ್ರತಿನಿತ್ಯ 1 ರೂ. ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ಇದೀಗ 2.6 ಲಕ್ಷ ರೂಪಾಯಿ ಒಗ್ಗೂಡಿಸಿ ಬೈಕನ್ನು ಖರೀದಿಸಿ ಸುದ್ದಿಯಾಗಿದ್ದಾನೆ.
Tamil Nadu | A youth in Salem paid Rs 2.6 lakh to buy a bike with Re 1 coins he collected in three years. pic.twitter.com/ayLgBa23Ja
— ANI (@ANI) March 28, 2022
ಬಬೂತಿ ವಿ. ಎಂಬ ಯುವಕ ಬೈಕ್ ಖರೀದಿಸಿದಾತ. ಬಿಸಿಎ ಪದವೀದರನಾಗಿರುವ ಆತ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆ ವೇಳೆ ಹೊಸ ಬೈಕ್ ಖರೀಸುವ ಕನಸು ಕಂಡಿದ್ದ. ಆದರೆ ಆತನ ಬಳಿ ಹಣವಿರಲಿಲ್ಲ. ಆ ಕಾರಣ ಬೈಕ್ ಖರೀದಿಗೆ ಹಣ ಒಗ್ಗೂಡಿಸುವ ನಿರ್ಧಾರಕ್ಕೆ ಬಂದ. ಆತ ಪ್ರತಿನಿತ್ಯ ತನ್ನ ಪಿಗ್ಗಿ ಬ್ಯಾಂಕ್ ನಲ್ಲಿ 1 ರೂ.ಗಳ ನಾಣ್ಯ ಹಾಕುತ್ತಿದ್ದ. ಮೂರು ವರ್ಷಗಳ ಬಳಿಕ ಆ ಹಣ 2.6 ಲಕ್ಷ ರು.ಗಳಿಗೆ ತಲುಪಿದೆ.
ಯುವಕ ತಾನು ಸಂಗ್ರಹಿಸಿದ ಉಳಿತಾಯ ಹಣದೊಂದಿಗೆ ಶೋರೂಮ್‌ಗೆ ಬಂದಾಗ ಅಲ್ಲಿನ ಸಿಬ್ಬಂದಿ ದಂಗಾಗಿದ್ದಾರೆ. ಆತ ಚೀಲಗಳಲ್ಲಿತುಂಬಿ ತಂದಿದ್ದ ಹಣವನ್ನು ಎಣಿಸಲು ಭಾರತ್ ಏಜೆನ್ಸಿ ಶೋರೂಮ್ ಸಿಬ್ಬಂದಿಗೆ ಬರೊಬ್ಬರಿ 10 ಗಂಟೆ ಕಾಲ ಹಿಡಿದಿದೆ. ಅದೇನೇ ಇರಲಿ ಯುವಕ ಮಾತ್ರ ತನ್ನ ಕನಸಿನ ಡೋಮಿನಾರ್ ಬೈಕನ್ನು ಖರೀದಿಸಿ ಖುಷಿಯಿಂದ ಹೊರಬಂದಿದ್ದಾನೆ.