ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಘಾಲಯ ಸರ್ಕಾರಕ್ಕೆ ಶಾಕ್ ಎದುರಾಗಿದ್ದು ಆಡಳಿತರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಯ ಇಬ್ಬರು ಶಾಸಕರು ಮತ್ತು ಒಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಆರು ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಎನ್‌ಪಿಪಿ ಮುನ್ನಡೆಸುತ್ತಿದ್ದು, ಬಿಜೆಪಿ ಸಹ ಈ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದೆ.
ಮೌಸಿನ್‌ರಾಮ್‌ನ ಟಿಎಂಸಿ ಶಾಸಕ ಎಚ್‌ಎಂ ಶಾಂಗ್‌ಪ್ಲಿಯಾಂಗ್, ರಾಕ್‌ಸಮ್ಗ್ರೆ ಎನ್‌ಪಿಪಿ ಶಾಸಕ ಬೆನೆಡಿಕ್ ಆರ್ ಮರಕ್ ಮತ್ತು ಸೆಲ್ಸೆಲ್ಲಾ ಶಾಸಕ ಎನ್‌ಪಿಪಿ ಫೆರ್ಲಿನ್ ಸಿಎ ಸಂಗ್ಮಾ ಅವರು ಅಸೆಂಬ್ಲಿ ಸ್ಪೀಕರ್ ಮೆಟ್ಬಾ ಲಿಂಗ್ಡೋಹ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ರಾಜೀನಾಮೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಂಗ್‌ಪ್ಲಿಯಾಂಗ್, “ನಾವು ರಾಜ್ಯದಲ್ಲಿ ಅಭಿವೃದ್ಧಿ ಬಯಸುತ್ತೇವೆ. ಅಂತಹ ಅಭಿವೃದ್ಧಿಯನ್ನು ಬಿಜೆಪಿ ಮಾತ್ರ ನೀಡಲು ಸಾಧ್ಯ. ನೆರೆಯ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಒಂದೇ ದಿನದಲ್ಲಿ 25,000 ಯುವಕರಿಗೆ ಉದ್ಯೋಗ ಪತ್ರಗಳನ್ನು ತಲುಪಿಸಿದ್ದಾರೆ. ಅಂತಹ ಸಾಧನೆಗಳು ಇಲ್ಲಿ ಏಕೆ ಮಾಡಬಾರದು ಎಂದು ಯೋಚಿಸಿ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದೇವೆ ಎಂದಿದ್ದಾರೆ.
ಆರು ಪಕ್ಷಗಳ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಸರ್ಕಾರದ ಭಾಗವಾಗಿರುವ ಬಿಜೆಪಿ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ಎಲ್ಲ 60 ಸ್ಥಾನಗಳಿಗೂ ಸ್ಪರ್ಧಿಸಲಿದೆ. 2018ರಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷ 47 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ನಡುವಿನ ಸಂಬಂಧ ಹಳಸಿದೆ.
2018 ರ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿದೆ – ಪಿಂಥೋರಂಖ್ರಾ (ಅಲೆಕ್ಸಾಂಡರ್ ಲಾಲೂ ಹೆಕ್) ಮತ್ತು ದಕ್ಷಿಣ ಶಿಲ್ಲಾಂಗ್ (ಸಾನ್ಬೋರ್ ಶುಲ್ಲೈ). ಶುಲ್ಲೈ ಈಗ MDA ಸರ್ಕಾರದ ಕ್ಯಾಬಿನೆಟ್ ಸಚಿವರಾಗಿದ್ದಾರೆ.