ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಬಂಕ್ ನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಜಾರಿಬಿದ್ದು ಮೂವರು ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಈ ದುರಂತ ಸಂಭವಿಸಿದೆ.
ಭಾನುವಾರ ಸಂಜೆ 5:40 ರ ಹೊತ್ತಿಗೆ ಶಿವ ಎನ್ನುವವರು ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಅದನ್ನು ಗಮನಿಸಿದ ಆನಂದ್ ಹಾಗೂ ರವಿ ಶಿವನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಅವರಿಬ್ಬರು ಕೂಡ ಮೃತಪಟ್ಟಿದ್ದಾರೆ.
ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ಕಡಪ ಜಿಲ್ಲೆಯ ಮೂವರನ್ನು ರಾಯಚೋಟಿಗೆ ಕಳುಹಿಸಿದ್ದು, ಬಹಳ ದಿನಗಳಿಂದ ಬಳಕೆಯಲ್ಲಿಲ್ಲದ ಟ್ಯಾಂಕ್ ನ್ನು ಸ್ವಚ್ಛಗೊಳಿಸಲು ಪೆಟ್ರೋಲ್ ಟ್ಯಾಂಕ್ ಗುಂಡಿಗೆ ಇಳಿದಾಗ ಈ ಅವಘಡ ನಡೆದಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಮೊದಲು ಒಬ್ಬರನ್ನು ಹೊರತೆಗೆದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಇನ್ನಿಬ್ಬರು ಟ್ಯಾಂಕ್ ಒಳಗೆಯೇ ಉಸಿರು ಬಿಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.