ಹೊಸದಿಗಂತ ಡಿಜಿಟಲ್ ಡೆಸ್ಕ್
ನೈಋತ್ಯ ರೈಲ್ವೆ (SWR) ಇಲಾಖೆಯು ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ, ತುಮಕೂರು-ಕೊರಟಗೆರೆ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಬಿಡ್‌ಗಳನ್ನು ಆಹ್ವಾನಿಸುವುದರೊಂದಿಗೆ ದಶಕದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ನಿರ್ಣಾಯಕ ರೈಲು ಮಾರ್ಗಗಳ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಇದರ ಜೊತೆಗೆ ಬಾಗಲಕೋಟ-ಕುಡಚಿ ಲೈನ್‌ನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.
191-ಕಿಮೀ ಉದ್ದದ ತುಮಕೂರು- ದಾವಣಗೆರೆ ಮಾರ್ಗಕ್ಕೆ 2011-12ರಲ್ಲಿ ಅನುಮೋದನೆ ಸಿಕ್ಕಿದ್ದರೆ, ರಾಯದುರ್ಗ ಮಾರ್ಗಕ್ಕೆ 2007-08 ರಷ್ಟು ಹಿಂದೆಯೇ ಅನುಮೋದನೆ ಸಿಕ್ಕಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಎರಡೂ ಯೋಜನೆಗಳು ದೀರ್ಘ ಸಮಯದಿಂದ ಬಾಕಿ ಉಳಿದಿವೆ.
ದಾವಣಗೆರೆ ಬ್ರಾಡ್ ಗೇಜ್ ಲೈನ್‌ಗಾಗಿ ಎಸ್‌ಡಬ್ಲ್ಯೂಆರ್‌ನ ಟೆಂಡರ್‌ನಲ್ಲಿ ಊರುಕೆರೆ ಮತ್ತು ತಿಮ್ಮರಾಜನಹಳ್ಳಿ ನಡುವಿನ 13.8 ಕಿಮೀ ವ್ಯಾಪ್ತಿಯಲ್ಲಿ ರೈಲು ನಿಲ್ದಾಣ, ಪ್ಲಾಟ್‌ಫಾರ್ಮ್‌ಗಳು, ಸುರಂಗಮಾರ್ಗಗಳು ಮತ್ತು ಸಂಬಂಧಿತ ಕಾಮಗಾರಿಗಳ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಒಳಗೊಂಡಿದೆ. ಕಾಮಗಾರಿಗೆ 98.39 ಕೋಟಿ ರೂ. ಮೀಸಲಿಡಲಾಗಿದೆ.
ರಾಯದುರ್ಗ ಮಾರ್ಗದ ತುಮಕೂರು-ಕೊರಟಗೆರೆ (30.2 ಕಿ.ಮೀ) ಭಾಗದ ಕಾಮಗಾರಿಗೆ 270.31 ಕೋಟಿ ರೂ.ಗಳ ಟೆಂಡರ್ ಅಂದಾಜಿಸಲಾಗಿದೆ. ಕೆಲಸಗಳಲ್ಲಿ ವಿದ್ಯುದೀಕರಣ, ಸಿಗ್ನಲಿಂಗ್ ಮತ್ತು ದೂರಸಂಪರ್ಕ ಸೇರಿವೆ.
“ನಮಗೆ ಭೂಮಿ ಹಸ್ತಾಂತರವಾದ ಬಳಿಕ ಎರಡೂ ಮಾರ್ಗಗಳ ಕಾಮಗಾರಿಗಳನ್ನು ಹಂತ ಹಂತವಾಗಿ ನಿರ್ತೆಮಿಸಲಾಗುತ್ತದೆ” ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆ ವೇಗ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬಾಕಿ ಉಳಿದಿರುವ ಯೋಜನೆಗಳನ್ನು ರಾಜ್ಯ ಸರ್ಕಾರದೊಂದಿಗಿನ ಸಮನ್ವಯ ಸಭೆಯಲ್ಲಿ ಎಸ್‌ಡಬ್ಲ್ಯೂಆರ್ ಜನರಲ್ ಮ್ಯಾನೇಜರ್ ಮತ್ತು ರೈಲ್ವೇ ಸಚಿವರು ಪ್ರಸ್ತಾಪಿಸಿದ್ದಾರೆ. ನಮಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಭೂಸ್ವಾಧೀನ ಪ್ರಕ್ರಿಯೆ ಕಾನೂನು ವಿಷಯಗಳನ್ನು ಒಳಗೊಂಡಿರುವುದರಿಂದ ವಿಳಂಬ ಸಾಮಾನ್ಯ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ