Thursday, October 6, 2022

Latest Posts

ರಾಜ್ಯದಲ್ಲಿ ಭಾರೀ ಮಳೆಗೆ 3 ಸಾವಿರ ಕೋಟಿ ನಷ್ಟ, 110 ಸಾವು: ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಈ ಬಾರಿ ಶೇ.40 ರಷ್ಟು ಹೆಚ್ಚು ಮಳೆಯಾಗಿದ್ದು, 110 ಸಾವು ಸಂಭವಿಸಿವೆ. 3 ಸಾವಿರ ಕೋಟಿ ನಷ್ಟವಾಗಿದ್ದು, ವಿಶೇಷ ಅನುದಾನ ನೀಡುವಂತೆ ಅಧ್ಯಯನ ತಂಡದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಇನ್ನೂ ಮಳೆ ಮುಂದುವರೆದಿದ್ದು, ಹಾನಿ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ 110 ಜನ ಮಳೆ ಅನಾಹುತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. 717 ಜಾನುವಾರುಗಳು ಅಸುನೀಗಿವೆ. 27,188 ವಿದ್ಯುತ್ ಕಂಬಗಳು ಧರೆಗುರುಳಿದ್ದು, 3016 ಟ್ರಾನ್ಸ್ ಫಾರ್ಮರ್​​ಗಳಿಗೆ ಹಾನಿಯಾಗಿದೆ. 1780 ಸೇತುವೆ ಹಾನಿಗೊಳಗಾಗಿದ್ದು, 278 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 4394 ಅಂಗನವಾಡಿ ಕೇಂದ್ರಗಳು,7240 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. 6 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್ ಬೆಳೆ ನಾಶವಾಗಿದೆ. ಅಪಾರ ಪ್ರಮಾಣದ ರಸ್ತೆಗಳಿಗೆ ಹಾನಿಯಾಗಿದ್ದು, ಮೂಲಸೌಕರ್ಯಗಳನ್ನು ಮರು ಕಲ್ಪಿಸಬೇಕಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ತಂದಿರುವುದಾಗಿ ಸಿಎಂ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇ.40 ರಷ್ಟು ಹೆಚ್ಚಿನ ಮಳೆಯಾಗಿದೆ. ರಾಜ್ಯದ ಬಹುತೇಕ ಎಲ್ಲ ಕರೆಕಟ್ಟೆಗಳು ಭರ್ತಿಯಾಗಿದ್ದು, ಜಲಾಶಯಗಳೂ ಭರ್ತಿಯಾಗಿವೆ. ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಂತರ್ಜಲ ಮಟ್ಟ ಶೇ.100 ರಷ್ಟು ಹೆಚ್ಚಿದ್ದು, ಇತರ ಕೆಲ ಜಿಲ್ಲೆಗಳಲ್ಲಿ ಸುಧಾರಣೆ ಕಂಡಿದೆ. ಅದರಂತೆ ಸಾಕಷ್ಟು ಪ್ರಮಾಣದ ಹಾನಿಯೂ ಸಂಭವಿಸಿದೆ ಎನ್ನುವ ಮಾಹಿತಿಯನ್ನು ತಿಳಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.

ಈ ಎಲ್ಲಾ ವಿಷಯಗಳ ಆಧಾರದಲ್ಲಿ ಅಧ್ಯಯನ ತಂಡ ಮೂರು ತಂಡಗಳಾಗಿ ಜಿಲ್ಲಾವಾರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುತ್ತಿದೆ. ಅಧ್ಯಯನ ನಡೆಸಿ ಮರಳುತ್ತಿದ್ದಂತೆ ತಂಡದ ಜೊತೆ ಮತ್ತೊಮ್ಮೆ ಸಭೆ ನಡೆಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ನಮಗೆ ಅಂದಾಜು 3 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಮತ್ತೊಮ್ಮೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ಎಲ್ಲಾ ಜಿಲ್ಲಾಧಿಕಾರಿಗಳು ನೀಡುವ ನಷ್ಟದ ವರದಿಯ ಅನುಸಾರ ಕೇಂದ್ರ ಸರ್ಕಾರಕ್ಕೆ ಪರಿಹಾರ ಬೇಡಿಕೆ ಇರಿಸುವುದಾಗಿ ಸಿಎಂ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!