ಹೊಸದಿಗಂತ ಡಿಜಿಟಲ್ ಡೆಸ್ಕ್:
5ನೇ ಅಂತಸ್ತಿನಿಂದ ಕೆಳಗೆ ಹಾರಿದ ನಾಯಿ ಬಿದ್ದು 3 ವರ್ಷದ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿಯ ಮಾಲೀಕನನ್ನು ಅರೆಸ್ಟ್ ಮಾಡಲಾಗಿದೆ.
ಮುಂಬೈ ಮಹಾನಗರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ದೈತ್ಯಾಕಾರದ ನಾಯಿ ಬಿದ್ದ ರಭಸಕ್ಕೆ ಮೂರು ವರ್ಷದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಮುಂಬೈನ ಮುಂಬ್ರಾ ಬಳಿಯ ಅಮೃತ್ ನಗರದ ಚಿರಾಗ್ ಮೆನ್ಸನ್ ಎಂಬ ಐದು ಅಂತಸ್ತಿನ ಕಟ್ಟಡದ ಫ್ಲ್ಯಾಟ್ ವೊಂದರಲ್ಲಿ ನಾಯಿ ಸಾಕಲಾಗಿತ್ತು.
ಈ ನಾಯಿ ಮಂಗಳವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಆಟವಾಡುತ್ತಾ ರಸ್ತೆಯ ಮೇಲೆ ಹಠಾತ್ ಎಗರಿ ಬಿದ್ದಿದೆ. ಈ ವೇಳೆ ಅಜ್ಜಿ ಹಾಗೂ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗು ನಾಯಿಯ ಅಡಿಯಲ್ಲಿ ಸಿಲುಕಿದೆ.
ನಾಯಿಯ ಮಾಲೀಕ ಮತ್ತು ಇತರ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬ್ರಾ ಪೊಲೀಸರು ಇದೀಗ ನಾಯಿ ಮಾಲೀಕರನ್ನು ಬಂಧಿಸಿದ್ದಾರೆ.
ಕೊಲೆಗೆ ಸಮನಾಗದ ತಪ್ಪಿತಸ್ಥ ಹತ್ಯೆ, ನಿರ್ಲಕ್ಷ್ಯದಿಂದ ಸಾವು, ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.