ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮದ ಪ್ರವೇಶ ದ್ವಾರಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿಡುವ ವಿಚಾರವಾಗಿ ಎರಡು ಗ್ರಾಮಸ್ಥರ ನಡುವೆ ವಿವಾದ ಉಂಟಾಗಿತ್ತು. ಎರಡು ಗುಂಪುಗಳು ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಹೋದ ಪೊಲೀಸರ ಮೇಲೆ ಗ್ರಾಮಸ್ಥರು ತಿರುಗಿ ಬಿದ್ದಿದ್ದು, ಘಟನೆಯಲ್ಲಿ ಹೆಚ್ಚುವರಿ ಎಸ್ಪಿ ಸೇರಿದಂತೆ 30 ಪೊಲೀಸರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಚಂದೈ ಏಕೋ ಗ್ರಾಮದಲ್ಲಿ ಗುರುವಾರ ನಡೆದ ಘರ್ಷಣೆಯಲ್ಲಿ 300 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಒಂದು ಗುಂಪು ಶಿವಾಜಿ ಮಹಾರಾಜರ ಹೆಸರಿಡಲು ಸೂಚಿಸಿದ್ದಾರೆ. ಮತ್ತೊಂದು ಗುಂಪು ಬಿಜೆಪಿ ಮುಖಂಡ ದಿವಂಗತ ಗೋಪಿನಾಥ್ ಮುಂಡೆ ಹೆಸರಿಡುವಂತೆ ಸೂಚಿಸಿದರು. ಈ ವಿಚಾರವಾಗಿ ಗುರುವಾರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹಸ್ನಾಬಾದ್ ಪೊಲೀಸರು ಗ್ರಾಮಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸಂಜೆ ವೇಳೆಗೆ ಗ್ರಾಮದಲ್ಲಿ ಮತ್ತೆ ಘರ್ಷಣೆ ನಡೆದಿದೆ. ಕೆಲವು ಗ್ರಾಮಸ್ಥರು ಸ್ಥಳೀಯ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕೆಡವಲು ಪ್ರಯತ್ನಿಸಿದಾಗ, ತೀವ್ರ ವಿವಾದ ಭುಗಿಲೆದ್ದು ಘರ್ಷಣೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ, ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ದಾಳಿಯಲ್ಲಿ ಒಟ್ಟು 10 ಗ್ರಾಮಸ್ಥರು ಗಾಯಗೊಂಡಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೀಸಲು ಪಡೆಯನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿದೆ. ಘಟನೆಯಲ್ಲಿ ಮೂರು ಪೊಲೀಸ್ ವಾಹನಗಳು ಧ್ವಂಸವಾಗಿದ್ದು, ಇದುವರೆಗೂ 34 ಜನರನ್ನು ಬಂಧಿಸಲಾಗಿದೆ. ಸದ್ಯ ಚಂದೈ ಏಕೋ ಗ್ರಾಮ ಸಶಸ್ತ್ರ ಪಡೆಗಳ ವಶದಲ್ಲಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪ್ರಭಾರಿ ಎಸ್ಪಿ ಹರ್ಷ ಪೊದ್ದಾರ್ ತಿಳಿಸಿದ್ದಾರೆ.