ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಬಿಪರ್‌ಜೊಯ್ ಚಂಡಮಾರುತದಿಂದಾಗಿ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, ಈಗಾಗಲೇ ೩೦ ಸಾವಿರ ಜನರನ್ನು ಅಲ್ಲಿಂದ ಸ್ಥಳಾಂತರಗೊಳಿಸಲಾಗಿದೆ.
ಎರಡು ದಿನಗಳ ಮುನ್ನವೇ ಅಗತ್ಯ ಕ್ರಮಗಳನ್ನು ಕೈಗೊಂಡ ಅಧಿಕಾರಿಗಳು ಜನರನ್ನು ಸ್ಥಳಾಂತರಿಸಿ ಬದಲಿ ವ್ಯವಸ್ಥೆ ಮಾಡಿದ್ದಾರೆ. ಕಚ್‌ನ ಸಾಕಷ್ಟು ಮಂದಿ ಇನ್ನೂ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಮ್ಮ ಜಾನುವಾರಿಗಳು ನಮಗೆ ಜೀವನ ಕೊಟ್ಟಿವೆ, ಅವುಗಳನ್ನು ಬಿಟ್ಟು ಬರೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು, ಅಧಿಕಾರಿಗಳಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಬಿಪರ್‌ಜೊಯ್ ಚಂಡಮಾರುತದಿಂದಾಗಿ ಹವಾಮಾನ ವೈಪರೀತ್ಯದಿಂದ ಈ ಪ್ರದೇಶಗಳ ಮೂಲಕ ಹಾದುಹೋಗುವ 60ಕ್ಕೂ ಹೆಚ್ಚು ರೈಲುಗಳನ್ನು ಪಶ್ಚಿಮ ರೈಲ್ವೆ ಇಲಾಖೆ ರದ್ದುಗೊಳಿಸಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿರುವವರ ಹಣವನ್ನು ವಾಪಾಸ್ ಮಾಡಲಾಗುತ್ತಿದೆ.