ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸಭೆ ನಡೆಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಅಧಿಕೃತವಾಗಿ ಅಧಿಕಾರಿಗಳ ಜೊತೆಗೆ ಸುರ್ಜೆವಾಲ ಸಭೆ ನಡೆಸಿಲ್ಲ. ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ ಅಷ್ಟೇ ಎಂದು ಹೇಳಿದರು.
ಡಿಸಿಎಂ ಪಾಲ್ಗೊಂಡಿದ್ದ ಸಭೆ ಅದು. ಚುನಾವಣೆ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯಲಾಗಿತ್ತು. ಕುಮಾರಸ್ವಾಮಿಯವರು ಸುಮ್ಮನೆ ಆರೋಪ ಮಾಡುತ್ತಾರೆ. ಸುರ್ಜೇವಾಲಾ ಅವರು ಅಧಿಕಾರಿಗಳ ಸಭೆ ಕರೆಯೋಕ್ಕಾಗುತ್ತಾ..?, ಬಿಜೆಪಿಯವರು ಬೇಕಾದರೆ ರಾಜ್ಯಪಾಲರಿಗೆ ದೂರು ಕೊಡಲಿ ಎಂದರು.
ಇದೇ ವೇಳೆ ಪ್ರತಾಪ್ ಸಿಂಹ ವಿರುದ್ಧ ಮಾತನಾಡಿದ ಸಿಎಂ, ಯಾರು ಹೊಂದಾಣಿಕೆ ರಾಜಕೀಯ ಮಾಡ್ತಿರೋರು ಅಂತ ಪ್ರತಾಪ್ ಸಿಂಹ ಹೇಳಲಿ. ತನಿಖೆ ಮಾಡಿಸಿ ಅಂತ ಈ ಪ್ರತಾಪ್ ಸಿಂಹ ಹೇಳಿದ್ನಾ? ಪ್ರತಾಪ್ ಸಿಂಹ ಎಳಸು ಎಂದು ಹೇಳಿದರು.
ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಸಭೆ ನಡೆಸಿದ ಸಂಬಂಧ ಇಂದು ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧರಿಸಿದೆ. ಇಂದು ಮಧ್ಯಾಹ್ನ 12.30 ಕ್ಕೆ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ. ಅಧಿಕಾರದಲ್ಲಿ ಇರದಿದ್ದರೂ ಕಾಂಗ್ರೆಸ್ ಉಸ್ತುವಾರಿ ಸರ್ಕಾರದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.