November 6, 2026
Friday, November 6, 2026
spot_img

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಶೇ.31.2ರಷ್ಟು ಪತ್ತೆ: ಕೇಂದ್ರದ ಸ್ಪಷ್ಟನೆಗೆ ರಾಜ್ಯ ಸರ್ಕಾರದ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಾಹನ ಸವಾರರು ಖರೀದಿಸುವ ಪೆಟ್ರೋಲ್‌ನ ಗುಣಮಟ್ಟದ ಕುರಿತು ರಾಜ್ಯ ಸರ್ಕಾರ ಗಂಭೀರ ಪ್ರಶ್ನೆ ಎತ್ತಿದೆ. ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣಕ್ಕೆ ನಿಗದಿಪಡಿಸಿರುವ E20 ಮಾನದಂಡವನ್ನು ಹಲವು ತೈಲ ಕಂಪನಿಗಳು ಉಲ್ಲಂಘಿಸಿರುವ ಶಂಕೆ ವ್ಯಕ್ತವಾಗಿದೆ.

ಹೌದು! ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯಲ್ಲಿ ಕೆಲವು ಪೆಟ್ರೋಲ್‌ಗಳಲ್ಲಿ ಎಥೆನಾಲ್ ಪ್ರಮಾಣ ಶೇ.20ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

63 ಮಾದರಿಗಳ ಪರೀಕ್ಷೆ

IOCL, HPCL, BPCL, ನಯಾರಾ ಮತ್ತು ಶೆಲ್ ಸೇರಿದಂತೆ ಪ್ರಮುಖ ತೈಲ ಕಂಪನಿಗಳ ಪೆಟ್ರೋಲ್ ಬಂಕ್‌ಗಳಿಂದ ಒಟ್ಟು 63 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಮೊದಲಿಗೆ ಈ ಮಾದರಿಗಳನ್ನು ಸಂಬಂಧಪಟ್ಟ ಕಂಪನಿಗಳ ಪ್ರಯೋಗಾಲಯಗಳಿಗೆ ಕಳುಹಿಸಿ ಎಥೆನಾಲ್ ಪ್ರಮಾಣದ ವಿವರ ಕೇಳಲಾಗಿತ್ತು. ಆದರೆ ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಖಾಸಗಿ ಪ್ರಯೋಗಾಲಯದಲ್ಲಿ ಸ್ವತಂತ್ರ ಪರೀಕ್ಷೆ ನಡೆಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರು ಮೂಲದ ಶ್ರಿರಾಮ್ ಸಂಶೋಧನಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ IOCL ಪೆಟ್ರೋಲ್‌ನಲ್ಲಿ ಶೇ.31.2, HPCLನಲ್ಲಿ ಶೇ.30.5, BPCLನಲ್ಲಿ ಶೇ.26.5, ನಯಾರಾದಲ್ಲಿ ಶೇ.26.1 ಹಾಗೂ ಶೆಲ್ ಪೆಟ್ರೋಲ್‌ನಲ್ಲಿ ಶೇ.25.5ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ. ಬೆಂಗಳೂರ ನಗರ ಸೇರಿದಂತೆ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಈ ವ್ಯತ್ಯಾಸ ಕಂಡುಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:

ವಾಹನ ಸವಾರರಿಗೆ ಆರ್ಥಿಕ ಹೊರೆ ಆತಂಕ

ಎಥೆನಾಲ್ ಪ್ರಮಾಣ ಹೆಚ್ಚಾದರೆ ವಾಹನಗಳ ಮೈಲೇಜ್ ಕಡಿಮೆಯಾಗುವ ಜೊತೆಗೆ ನಿರ್ವಹಣಾ ವೆಚ್ಚವೂ ಹೆಚ್ಚಾಗಬಹುದು ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ. ಮೈಲೇಜ್ ಶೇ.10ರಷ್ಟು ಕುಸಿದರೆ ವಾಹನ ಸವಾರರಿಗೆ ವಾರ್ಷಿಕ 62 ಸಾವಿರ ಕೋಟಿ ನಷ್ಟವಾಗಬಹುದು ಹಾಗೂ ಸರ್ವಿಸಿಂಗ್ ವೆಚ್ಚದಲ್ಲಿ ಹೆಚ್ಚುವರಿಯಾಗಿ 39 ಸಾವಿರ ಕೋಟಿ ಹೊರೆ ಬೀಳಬಹುದು ಎಂದು ಅಂದಾಜಿಸಿದೆ.

ಪರಿಹಾರ ನಿಧಿಗೆ ರಾಜ್ಯದ ಆಗ್ರಹ

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣದಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡಲು ವಿಶೇಷ ನಿಧಿ ಸ್ಥಾಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.

Must Read

Skip to toolbar