ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬಿನ ದರ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ವಶದಲ್ಲಿದ್ದಾಗ ಅಸ್ವಸ್ಥಗೊಂಡು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಕಬ್ಬು ಬೆಳೆಗಾರ ಬಸವರಾಜ್ ಅವರ ಆರೋಗ್ಯವನ್ನು ರೈತ ಮುಖಂಡ ಚೂನಪ್ಪ ಪೂಜಾರಿ ಶುಕ್ರವಾರ ವಿಚಾರಿಸಿದರು.
ಇತ್ತೀಚೆಗಷ್ಟೇ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಸವರಾಜ್ ಅವರಿಗೆ ಪೊಲೀಸ್ ವಶದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಜನರಲ್ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ ಎಂದು ಚೂನಪ್ಪ ಪೂಜಾರಿ ತಿಳಿಸಿದರು.
ಶಾಂತಿಯುತವಾಗಿ ಹೋರಾಟ ನಡೆಸಲು ಬಂದ ರೈತರ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ. ಸರ್ಕಾರ ಹಾಗೂ ಮುಖ್ಯಮಂತ್ರಿ ರೈತರನ್ನು ಗೌರವದಿಂದ ನಡೆಸಿಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ:
ಇದೇ ವೇಳೆ ಕಬ್ಬು ಬೆಳೆಗಾರರಿಗೆ ಧೈರ್ಯ ತುಂಬಿದ ಅವರು, ಕಾರವಾರ, ವಿಜಯಪುರ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಬ್ಬಿನ ದರ ನಿಗದಿ ಕುರಿತು ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ರೈತರು ಆತಂಕಕ್ಕೊಳಗಾಗದೆ, ಕಾರ್ಖಾನೆಗಳ ಆರಂಭಕ್ಕೆ ಸಹಕರಿಸಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ರೈತರ ಹಿತರಕ್ಷಣೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘಟನೆ ಬದ್ಧವಾಗಿದ್ದು, ರೈತರ ಪರವಾಗಿ ನಿಂತು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.



