20 ಓವರ್‌ನಲ್ಲಿ 314 ರನ್: ಏಷ್ಯನ್‌ ಗೇಮ್ಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ನೇಪಾಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯನ್‌ ಗೇಮ್ಸ್‌ನ ಪುರುಷರ ಕ್ರಿಕೆಟ್‌ ಪಂದ್ಯದಲ್ಲಿ ನೇಪಾಳ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ 300+ ರನ್ ಬಾರಿಸಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂದು ಮಂಗೋಲಿಯಾ ವಿರುದ್ದ ನಡೆದ ಪಂದ್ಯದಲ್ಲಿ ನೇಪಾಳ ತಂಡವು ಅಮೋಘ ಪ್ರದರ್ಶನ ತೋರಿ ಮಿಂಚಿದೆ. ನೇಪಾಳ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 314 ರನ್ ಕಲೆ ಹಾಕಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಹೊಸ ಮೈಲಿಗಲ್ಲು ನೆಟ್ಟಿತು. ಈ ಮೊದಲು 2019ರಲ್ಲಿ ಐರ್ಲೆಂಡ್ ಎದುರು ಆಫ್ಘಾನಿಸ್ತಾನ ತಂಡವು 278/3 ರನ್ ಗಳಿಸಿದ್ದೇ ಇದುವರೆಗಿನ ಗರಿಷ್ಠ ಸ್ಕೋರ್ ಎನಿಸಿಕೊಂಡಿತ್ತು.

ನೇಪಾಳದ ಸಿಡಿಲಬ್ಬರದ ಇನಿಂಗ್ಸ್‌ನಲ್ಲಿ ಬರೋಬ್ಬರಿ 26 ಸಿಕ್ಸರ್‌ಗಳು ಮೂಡಿ ಬಂದವು. ಇದು ಕೂಡಾ ತಂಡವೊಂದು ಒಂದು ಇನಿಂಗ್ಸ್‌ನಲ್ಲಿ ದಾಖಲಿಸಿದ ಗರಿಷ್ಠ ಸಿಕ್ಸರ್ ಎನಿಸಿಕೊಂಡಿತು. ಈ ಮೊದಲು 2019ರಲ್ಲಿ ಐರ್ಲೆಂಡ್ ಎದುರು ಆಫ್ಘಾನಿಸ್ತಾನ ತಂಡದ ಬ್ಯಾಟರ್‌ಗಳು ಇನಿಂಗ್ಸ್‌ನಲ್ಲಿ 22 ಸಿಕ್ಸರ್ ಸಿಡಿಸಿದ್ದರು.

ನೇಪಾಳ ಆಲ್ರೌಂಡರ್‌ ದಿಪೇಂದರ ಸಿಂಗ್ ಐರೆ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಸ್ಟುವರ್ಟ್ ಬ್ರಾಡ್‌ ಬೌಲಿಂಗ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವುದರ ಜತೆಗೆ ಕೇವಲ 12 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

ಇನ್ನು ನೇಪಾಳದ ಕುಶಾಲ್ ಮಲ್ಲ ಕೇವಲ 34 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಮೊದಲು ಬ್ಯಾಟ್ ಮಾಡಿ 314 ರನ್ ಕಲೆಹಾಕಿದ ನೇಪಾಳ ತಂಡವು, ಇದಾದ ಬಳಿಕ ಮಂಗೋಲಿಯಾ ತಂಡವನ್ನು ಕೇವಲ 41 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 273 ರನ್ ಅಂತರದ ದಾಖಲೆಯ ಜಯ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!