ವಾಟ್ಸಪ್‌ ಸಂದೇಶಕ್ಕೆ ಕೇವಲ 24 ಗಂಟೆಯಲ್ಲಿ 32 ಬಸ್ ನಿಲ್ದಾಣಗಳು ಸ್ವಚ್ಚ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಿರಸಿ: ವಾಟ್ಸಪ್‌ನಲ್ಲಿ ಒಂದು ಮೆಸೇಜ್ ಬಂದ ಹಿನ್ನೆಲೆ ಕೇವಲ 24 ಗಂಟೆಯೊಳಗೆ ತಾಲೂಕಿನ 32ಕ್ಕೂ ಅಧಿಕ ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛಗೊಂಡು ನಳ ನಳಿಸುವಂತೆ ಆಗಿದೆ. ಈವರೆಗೆ ಒಂದೇ ಒಂದು ಕಸಬರಿಗೆಯನ್ನೂ ಕಾಣದ ಹಳ್ಳಿ ಭಾಗದ ಅನೇಕ ಬಸ್ ನಿಲ್ದಾಣಗಳಲ್ಲಿ ಈಗ ಕಸವಿಲ್ಲದಂತಾಗಿದೆ.

ಬಸ್‌ಗಾಗಿ ಕಾಯಲು ಬಂದ ಪ್ರಯಾಣಿಕರು ಕೂಡ ಕೂರಲೂ ಆಗದಂತಹ ಸ್ಥಿತಿಯಲ್ಲಿದ್ದ ಅನೇಕ ಬಸ್ ನಿಲ್ದಾಣಗಳು ಆಯಾ ಗ್ರಾಮ ಪಂಚಾಯ್ತಿಗಳ ಸಿಬ್ಬಂದಿಗಳ, ಅಧಿಕಾರಿಗಳ ನೇತೃತ್ವದಲ್ಲಿ ಹೊಸ ಅಧ್ಯಕ್ಷರ, ಉಪಾಧ್ಯಕ್ಷರ ತಂಡಗಳ ಮೇಲುಸ್ತುವಾರಿಯಲ್ಲಿ ಸ್ವಚ್ಛಗೊಳ್ಳುತ್ತಿವೆ.

ಕಳೆದ ಅಕ್ಟೋಬರ್ 7ರಂದು ತಾಲೂಕು ಪಂಚಾಯ್ತಿಯಲ್ಲಿ ಗ್ರಾಮ ಪಂಚಾಯತ್ ಪಿಡಿಓಗಳ ಸಭೆ ನಡೆಸಿದ್ದ ಶಾಸಕ ಭೀಮಣ್ಣ ನಾಯ್ಕ ಅವರು ಒಂದು ಸೂಚನೆ ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇರಬೇಕು. ಹಾಗೆ ಗ್ರಾಮ ಪಂಚಾಯತ್ ಕೆಲಸ ಮಾಡಬೇಕು ಎಂದು ಹೇಳಿದ್ದರು.

ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಪಂಚಾಯ್ತಿಯ ನೂತನ ಪ್ರಭಾರಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ ಹೆಗಡೆ ಅವರು ಬುಧವಾರ ಸಂಜೆ ಒಂದು ಸಂದೇಶವನ್ನು ತಾಲೂಕು ಗ್ರಾಮ ಪಂಚಾಯ್ತಿಗಳ ಪಿಡಿಓಗಳ ಗ್ರೂಪ್‌ನಲ್ಲಿ ಹಾಕಿದ್ದರು. ಆಗಸ್ಟ್ 23ರೊಳಗೆ ಆಯಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿನ ಎಲ್ಲ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛಭಾರತ್ ಮಿಷನ್ ಯೋಜನೆ ಅಡಿ ಇರುವ ಒಣ ಕಸ ವಿಲೇವಾರಿ ಸಿಬ್ಬಂದಿ ಹಾಗೂ ಪಂಚಾಯ್ತಿಯ ನೌಕರರು ಸಹಿತ, ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಒಂದು ಅಭಿಯಾನ ಮಾದರಿಯಲ್ಲಿ ನಡೆಸುವಂತೆ ಕೋರಿದ್ದರು.

ಮೆಸೇಜ್ ಕಳಿಸಿದ 24 ಗಂಟೆಯೊಳಗೆ ತಾಲೂಕಿನ 32 ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛವಾದವು. ಗುದ್ದಲಿ, ಪಿಕಾಸಿ, ಕೆಲವಡೆ ನೀರನ್ನೂ ಒಯ್ದು ಸ್ವಚ್ಛಗೊಳಿಸಿದರು. ಬರಲಿರುವ ಆ.23ರೊಳಗೆ 32 ಪಂಚಾಯ್ತಿ ವ್ಯಾಪ್ತಿಯ ಎಲ್ಲ ಸಣ್ಣ ಪುಟ್ಟ ಬಸ್ ನಿಲ್ದಾಣಗಳು ಸ್ವಚ್ಛವಾಗಿಸಲು ಗ್ರಾಪಂ ತಂಡ ಕೂಡ ಮುಂದಾಗಿದೆ. ಒಂದೇ ದಿನಕ್ಕೆ ಈ ಪ್ರತಿಕ್ರಿಯೆ ಸಿಕ್ಕಿರುವುದು ಅಚ್ಚರಿಯಾಗಿದೆ ಎಂದೂ ಇಓ ಸತೀಶ ಹೆಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ಸ್ವಚ್ಛತೆಗೆ ಯಾವುದೇ ಖರ್ಚು ಹಾಕದೇ ಅಭಿಯಾನ ನಡೆಸಬೇಕು ಎಂಬುದಾಗಿ ಹೇಳಿದ್ದರು. ಗುರುವಾರದಿಂದ ಆರಂಭವಾದ ಈ ಸ್ವಚ್ಛತಾ ಅಭಿಯಾನವನ್ನು ಪ್ರಥಮ ಹಂತದಲ್ಲಿ ಆಯಾ ಪಂಚಾಯ್ತಿಗಳು ಆ.23ರ ತನಕ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!