ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 33 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.
ಅವರಲ್ಲಿ ಸುಮಾರು 17 ಮಂದಿ ನಕ್ಸಲರ ಮೇಲೆ 49 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು. 9 ಮಹಿಳೆಯರು ಸೇರಿದಂತೆ 22 ಕೇಡರ್‌ಗಳು ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ (CRPF) ಹಿರಿಯ ಅಧಿಕಾರಿಗಳ ಮುಂದೆ ಶರಣಾದರು. ಇಬ್ಬರು ಮಹಿಳೆಯರು ಸೇರಿದಂತೆ 11 ಮಂದಿ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಚವಾಣ್, ದೂರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ರಾಜ್ಯ ಸರ್ಕಾರದ ‘ನಿಯದ್ ನೆಲ್ಲನರ್’ (ನಿಮ್ಮ ಒಳ್ಳೆಯ ಗ್ರಾಮ) ಯೋಜನೆ, ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಶರಣಾದ 22 ನಕ್ಸಲೈಟ್‌ಗಳು ಮಾವೋವಾದಿಗಳ ಮಾಡ್ (ಛತ್ತೀಸ್‌ಗಢ) ಮತ್ತು ನುವಾಪಾ (ಒಡಿಶಾ) ವಿಭಾಗಗಳಲ್ಲಿ ಸಕ್ರಿಯರಾಗಿದ್ದರು. ಮಾವೋವಾದಿಗಳ ಮಾಡ್ ವಿಭಾಗದ ಅಡಿಯಲ್ಲಿ ಪಿಎಲ್‌ಜಿಎ (ಜನರ ವಿಮೋಚನಾ ಗೆರಿಲ್ಲಾ ಸೈನ್ಯ) ಕಂಪನಿ ಸಂಖ್ಯೆ 1ರಲ್ಲಿ ಉಪ ಕಮಾಂಡರ್ ಮುಚಾಕಿ ಜೋಗಾ ಮತ್ತು ಅದೇ ತಂಡದ ಸದಸ್ಯೆಯಾದ ಅವರ ಪತ್ನಿ ಮುಚಾಕಿ ಜೋಗಿ ಈ ಕಾರ್ಯಕರ್ತರಲ್ಲಿ ಸೇರಿದ್ದಾರೆ ಎಂದು ಚವಾಣ್ ಹೇಳಿದ್ದಾರೆ.
ಬಡೇಸಟ್ಟಿಯಲ್ಲಿ ಸಕ್ರಿಯವಾಗಿರುವ 11 ನಕ್ಸಲರನ್ನು ಗುರುತಿಸಲಾಗಿದೆ. ಅವರ ಶರಣಾಗತಿಯೊಂದಿಗೆ, ಪಂಚಾಯತ್ ಮಾವೋವಾದಿ ಮುಕ್ತವಾಗಿದೆ ಎಂದು ಚವಾಣ್ ಹೇಳಿದರು.