ಸರ್ಕಾರಿ ಉದ್ದೇಶಕ್ಕೆ 359 ಎಕರೆ ಭೂಮಿ ಗುರುತು: ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ

ಹೊಸದಿಗಂತ ವರದಿ ಮಡಿಕೇರಿ: 

ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸುಮಾರು 359 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಸರ್ಕಾರದ ವಿವಿಧ ಉದ್ದೇಶಗಳಿಗೆ, ಮಾಜಿ ಸೈನಿಕರಿಗೆ ಹಾಗೂ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಪಳನಿ ಪ್ರಕಾಶ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಸರ್ಕಾರಿ ಕಚೇರಿಗಳು, ವಸತಿ ಶಾಲೆಗಳು, ಅಂಗನವಾಡಿ, ಸಮುದಾಯ ಭವನ, ಮಾಜಿ ಸೈನಿಕರು, ಹಾಗೆಯೇ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರ್ಕಾರಿ ಭೂಮಿ ಗುರುತಿಸಲಾಗಿದೆ ಎಂದರು.

ಮಾಜಿ ಸೈನಿಕರಿಗೆ ಶೇ.20 ಮೀಸಲು: ನಿವೇಶನ ರಹಿತರಿಂದ 1300 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಶೇ.10 ರಿಂದ 20 ರಷ್ಟು ಭೂಮಿಯನ್ನು ಮಾಜಿ ಸೈನಿಕರಿಗೆ ಕಾಯ್ದಿರಿಸಲು ಉದ್ದೇಶಿಸಲಾಗಿದೆ ಎಂದರು. ನಿವೇಶನ ರಹಿತ ಸಂಬಂಧ ಆಯಾಯ ಗ್ರಾಮ ಸಭೆಯಲ್ಲಿ ನಿವೇಶನ ರಹಿತರನ್ನು ಆಯ್ಕೆ ಮಾಡಿದರೆ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೂಡಲೇ ಜಾಗ ಒದಗಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

4 ಕೋಟಿ ರೂ.ಅನುದಾನ ಲಭ್ಯ: ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 4 ಕೋಟಿ ರೂ. ಅನುದಾನವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಅವರು ಮಾಹಿತಿ ನೀಡಿದರು. ಮಡಿಕೇರಿ ನಗರದಲ್ಲಿ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸುವ ಕಾರ್ಯ ಇನ್ನೂ ಆರಂಭವಾಗಿಲ್ಲ. ಆ ನಿಟ್ಟಿನಲ್ಲಿ ಕೂಡಲೇ ಮನೆ ನಿರ್ಮಾಣಕ್ಕೆ ಮುಂದಾಗುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ನಗರಸಭೆ ಎಂಜಿನಿಯರ್ ಸೌಮ್ಯ ಅವರು ಜಿ+1 ಮಾದರಿಯಲ್ಲಿ ಮನೆ ನಿರ್ಮಿಸಬೇಕಿದ್ದು, ಒಂದು ಮನೆಗೆ 7 ಲಕ್ಷ ರೂ. ನಿಗದಿಯಾಗಿದ್ದು, ಟೆಂಡರ್ ಆಹ್ವಾನಿಸಿದರೂ ಸಹ ಯಾರೂ ಮುಂದೆ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸಾಲ ಸೌಲಭ್ಯ ಸಂಬಂಧ ಬ್ಯಾಂಕ್‍ಗಳಲ್ಲಿ ಸುಲಲಿತವಾಗಿ ಸಾಲ ದೊರೆಯುವಂತಾಗಬೇಕು. ಪೌರ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳು ತಲುಪಬೇಕು ಎಂದು ಸಮಿತಿ ಸದಸ್ಯ ಪಳನಿ ಪ್ರಕಾಶ್ ಮನವಿ ಮಾಡಿದರು.

ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪ್ರವೇಶಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಪಳನಿ ಪ್ರಕಾಶ್ ಅವರು ಕೋರಿದರು. ಅರುವತ್ತೊಕ್ಲು ಗ್ರಾ.ಪಂ.ವ್ಯಾಪ್ತಿಯ ಕಾರೆಕಾಡು ಗಿರಿಜನ ಕಾಲೋನಿಯಲ್ಲಿ ಒಂದು ತಿಂಗಳ ಒಳಗೆ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಅವರು, ಸೋಮವಾರಪೇಟೆ ತಾಲೂಕಿನ ಊರುಡುವೆ ಜಮೀನುಗಳಲ್ಲಿ ವಾಸವಾಗಿದ್ದ, 94 ಸಿ’ರಡಿ ಅರ್ಜಿ ಸಲ್ಲಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಹಕ್ಕು ಸಮಿತಿ ರಚನೆಯಾಗಿದೆ ಎಂದು ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಆಯ್ಕೆಯಾದ ಅರ್ಜಿಗಳನ್ನು 15 ದಿನದೊಳಗೆ ಉಪ ವಿಭಾಗ ಮಟ್ಟಕ್ಕೆ ಕಳುಹಿಸಿಕೊಡಬೇಕು. ನಂತರ 15 ದಿನದೊಳಗೆ ಜಿಲ್ಲಾ ಮಟ್ಟಕ್ಕೆ ಸಲ್ಲಿಸಿದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!