ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಪದಚ್ಯುತಿಗೊಳಿಸಲು ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಕಾರಣ ಕಳೆದ ವಾರ ವಿಶ್ವಹಿಂದೂ ಪರಿಷತ್ (ವಿಹೆಚ್ ಪಿ) ಕಾರ್ಯಕ್ರಮದಲ್ಲಿ ಅವರು ನೀಡಿದ್ದ ಹೇಳಿಕೆ.
ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಹೇಳಿಕೆಯನ್ನು ವಿರೋಧಿಸಿರುವ I.N.D.I.A ಮೈತ್ರಿಕೂಟದ ರಾಜ್ಯಸಭೆಯ 36 ಸಂಸದರು ಜಡ್ಜ್ ವಿರುದ್ಧ ಮಹಾಭಿಯೋಗ (ವಿಚಾರಣೆಗೆ ಒಳಪಡಿಸಿ ಪದಚ್ಯುತಿಗೊಳಿಸುವ ಪ್ರಕ್ರಿಯೆ) ಕ್ಕೆ ಸಹಿ ಹಾಕಿದ್ದಾರೆ.
ಮಹಾಭಿಯೋಗ ಅರ್ಜಿಗೆ ಪಕ್ಷೇತರ ಸಂಸದ ಕಪಿಲ್ ಸಿಬಲ್ ಸೇರಿದಂತೆ ವಿಪಕ್ಷಗಳ ಸಂಸದರು ಸಹಿ ಹಾಕಿದ್ದಾರೆ. ಹೆಚ್ಚಿನ ಸಹಿಗಳನ್ನು ಸಂಗ್ರಹಿಸಿದ ನಂತರ ಗುರುವಾರ ರಾಜ್ಯಸಭೆಯಲ್ಲಿ ಅರ್ಜಿಯನ್ನು ಮಂಡಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್, ಜೈರಾಮ್ ರಮೇಶ್, ಮತ್ತು ವಿವೇಕ್ ತಂಖಾ ಮುಂತಾದ ಪ್ರಮುಖ ನಾಯಕರು ಇದ್ದಾರೆ, ಇವರನ್ನು ಹೊರತುಪಡಿಸಿ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್; ತೃಣಮೂಲ ಕಾಂಗ್ರೆಸ್ಸಿನ ಸಾಕೇತ್ ಗೋಖಲೆ ಮತ್ತು ಸಾಗರಿಕಾ ಘೋಷ್; ಆರ್ಜೆಡಿಯ ಮನೋಜ್ ಕುಮಾರ್ ಝಾ; ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್; ಸಿಪಿಐ(ಎಂ)ನ ಜಾನ್ ಬ್ರಿಟಾಸ್; ಮತ್ತು ಸಿಪಿಐ ಸಂತೋಷ್ ಕುಮಾರ್ ಅವರು ಸಹಿ ಹಾಕಿದ್ದಾರೆ.
ಸಂವಿಧಾನದ 124(4) ಮತ್ತು 124(5) ವಿಧಿಗಳೊಂದಿಗೆ ನ್ಯಾಯಾಧೀಶರ (ವಿಚಾರಣೆ) ಕಾಯಿದೆಯ ಸೆಕ್ಷನ್ 3(1)(ಬಿ) ಅಡಿಯಲ್ಲಿ ನ್ಯಾಯಮೂರ್ತಿ ಯಾದವ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ನೋಟಿಸ್ ದಾರಿ ಮಾಡಿಕೊಡುತ್ತದೆ.1968ರ ನ್ಯಾಯಾಧೀಶರ ವಿಚಾರಣೆ ಕಾಯಿದೆಯ ಪ್ರಕಾರ, ಮೇಲ್ಮನೆಯಲ್ಲಿ ಅದನ್ನು ಆರಂಭಿಸಬೇಕಾದರೆ, ನ್ಯಾಯಾಧೀಶರ ವಿರುದ್ಧದ ದೂರನ್ನು ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯಲ್ಲಿ 50 ಸಂಸದರು ಸಹಿ ಮಾಡಿದ ನಿರ್ಣಯದ ಮೂಲಕ ಬೆಂಬಲಿಸಬೇಕು.
ಭಾನುವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಎಚ್‌ಪಿಯ ಕಾನೂನು ಕೋಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾಯಮೂರ್ತಿ ಯಾದವ್ “ನಮ್ಮ ಶಾಸ್ತ್ರಗಳು ಮತ್ತು ವೇದಗಳಲ್ಲಿ ದೇವತೆ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ನೀವು ಅಗೌರವಿಸಲು ಸಾಧ್ಯವಿಲ್ಲ. ನೀವು ನಾಲ್ಕು ಹೆಂಡತಿಯರನ್ನು ಹೊಂದಲು, ಹಲಾಲಾ ಮಾಡಲು ಅಥವಾ ತ್ರಿವಳಿ ತಲಾಖ್ ನೀಡುವುದು ಸಾಧ್ಯವಿಲ್ಲ. ‘ತ್ರಿವಳಿ ತಲಾಖ್’ ಹೇಳುವ ಹಕ್ಕು ನಮಗಿದೆಯೇ ಹೊರತು ಮಹಿಳೆಯರಿಗೆ ಜೀವನಾಂಶ ನೀಡುವುದಿಲ್ಲ ಎಂದು ನೀವು ಹೇಳುತ್ತೀರಿ ಎಂದು ಹೇಳಿದ್ದರು. ವಿಪಕ್ಷಗಳು ಈ ಹೇಳಿಕೆಯನ್ನು ವಿವಾದಾತ್ಮಕ ಎಂದು ಹೇಳುತ್ತಿವೆ. ಇದೇ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆ ಕುರಿತು ವರದಿ ಕೇಳಿದೆ.