ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ದಿಲ್ಲಿಯಲ್ಲಿ ಮಾ. 20ರಿಂದ 22ರ ವರೆಗೆ 36ನೇ ಅಂತಾರಾಷ್ಟ್ರೀಯ ಭೂಗರ್ಭ ವಿಜ್ಞಾನ ವರ್ಚುಯಲ್ ಸಮಾವೇಶ (ಐಜಿಸಿ) ಆಯೋಜನೆಗೊಂಡಿದೆ. ‘ಭೂಗರ್ಭ ವಿಜ್ಞಾನ: ಸುಸ್ಥಿರ ಭವಿಷ್ಯಕ್ಕೆ ಮೂಲ ವಿಜ್ಞಾನ’ ಎಂಬ ಧ್ಯೇಯವಾಕ್ಯವನ್ನು ಈ ಬಾರಿಯ ಸಮಾವೇಶಕ್ಕೆ ಅಳವಡಿಸಿಕೊಳ್ಳಲಾಗಿದೆ.
ಗಣಿ ಸಚಿವಾಲಯ, ಭೂ ವಿಜ್ಞಾನ ಸಚಿವಾಲಯ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾದ ವಿಜ್ಞಾನ ಅಕಾಡೆಮಿಗಳ ಜಂಟಿ ಸಹಭಾಗಿತ್ವದಲ್ಲಿ 36ನೇ ಅಂತಾರಾಷ್ಟ್ರೀಯ ಭೂಗರ್ಭ ವಿಜ್ಞಾನ ಸಮಾವೇಶ ನಡೆಸಲಾಗುತ್ತಿದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತಾರಾಷ್ಟ್ರೀಯ ಭೂಗರ್ಭ ವಿಜ್ಞಾನ ಸಮಾವೇಶವನ್ನು ಭೂವಿಜ್ಞಾನ ಕ್ಷೇತ್ರದ ಒಲಿಂಪಿಕ್ಸ್ ಎಂದೇ ಬಣ್ಣಿಸಲಾಗುತ್ತದೆ. ಭೂವಿಜ್ಞಾನ ಸಮಾವೇಶಗಳ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಾಯೋಜಕತ್ವ(ಐಯುಜಿಎಸ್)ದಲ್ಲಿ ಈ ಸಮಾವೇಶ ನಡೆಯುತ್ತಾ ಬಂದಿದೆ. ವಿಶ್ವದಾದ್ಯಂತ ಸುಮಾರು 5000-7000 ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಮಾವೇಶವು ಭೂವಿಜ್ಞಾನ ಕ್ಷೇತ್ರ ಮತ್ತು ವೃತ್ತಿಪರ ಜಾಲದಲ್ಲಿ ಜ್ಞಾನ ಮತ್ತು ಅನುಭವ ಹಂಚಿಕೆಗೆ ಅನನ್ಯ ವೇದಿಕೆ ಒದಗಿಸುತ್ತದೆ. ಇದು ಗಣಿಗಾರಿಕೆ, ಖನಿಜ ಪರಿಶೋಧನೆ, ನೀರು, ಖನಿಜ ಸಂಪನ್ಮೂಲ ಮತ್ತು ಪರಿಸರ ನಿರ್ವಹಣೆಯಲ್ಲಿನ ಇತ್ತೀಚಿನ ತಂತ್ರಜ್ಞಾನಗಳ ಕುರಿತು ಮೊದಲ ಮಾಹಿತಿ ನೀಡುತ್ತದೆ. ಇದು ಹೆಚ್ಚಿದ ಶೈಕ್ಷಣಿಕ ರಂಗದ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ, ಭೂವೈಜ್ಞಾನಿಕ ವಲಯದಲ್ಲಿ ಸಾಮರ್ಥ್ಯ ನಿರ್ಮಾಣಕ್ಕೆ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತದೆ.
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವ, ಭೂ ವಿಜ್ಞಾನ ಖಾತೆ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ್ ದಾನ್ವೆ ಮತ್ತು ಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿನ್ ಚೌಹಾಣ್ ಅವರು ಉಪಸ್ಥಿತರಿರುವರು.
ಇಡೀ ಜಗತ್ತು, ಇಂದು ತನ್ನ ಸುಸ್ಥಿರತೆಯ ಬಗ್ಗೆ ಚಿಂತಿಸುತ್ತಿದೆ. ಭೂವಿಜ್ಞಾನವು ಅದನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಸಾಮರ್ಥ್ಯ ಹೊಂದಿದೆ. ಈ ನಿಟ್ಟಿನಲ್ಲಿ 36ನೇ ಐಜಿಸಿಗೆ ಭೂಗರ್ಭ ವಿಜ್ಞಾನ – ಸುಸ್ಥಿರ ಭವಿಷ್ಯಕ್ಕಾಗಿ ಮೂಲ ವಿಜ್ಞಾನ ಎಂಬ ಘೋಷವಾಕ್ಯವಾಗಿದೆ. ಭೂಗರ್ಭ ವಿಜ್ಞಾನವು ಸುಸ್ಥಿರ ಭವಿಷ್ಯಕ್ಕೆ ಹೇಗೆ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಈ ವಿಜ್ಞಾನ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ. ಸುಸ್ಥಿರ ಅಭಿವೃದ್ಧಿಯ ಸಂದರ್ಭದಲ್ಲಿ ಭೂವಿಜ್ಞಾನ ಕ್ಷೇತ್ರದ ಉದಯೋನ್ಮುಖ ಮಾದರಿಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಭೂಮಿಯ ಪ್ರಕ್ರಿಯೆಗಳು ಮತ್ತು ಜೀವಗೋಳದ ವಿಸ್ಮಯ ಸೇರಿದಂತೆ ವಿವಿಧ ವಿದ್ಯಮಾನಗಳ ಮೇಲೆ ಸಂಕೀರ್ಣ ಸಂವಹನ, ಚರ್ಚೆಗಳು ನಡೆಯಲಿವೆ.
2012ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ 34ನೇ ಅಂತಾರಾಷ್ಟ್ರೀಯ ಭೂವಿಜ್ಞಾನ ಸಮಾವೇಶದಲ್ಲಿ ಭಾರತವು ಪ್ರಾದೇಶಿಕ ಪಾಲುದಾರ ರಾಷ್ಟ್ರಗಳ ನೇತೃತ್ವ ವಹಿಸಿತ್ತು. 2020ರಲ್ಲಿ 36ನೇ ಐಜಿಸಿ ಭಾರತವು ಪ್ರಾಯೋಜಕತ್ವ ಪಡೆದಿತ್ತು. ಆದರೆ 2020 ಮಾರ್ಚ್ 2-8ರಲ್ಲಿ ನಡೆಯಬೇಕಿದ್ದ ಸಮಾವೇಶಕ್ಕೆ ಕೋವಿಡ್ ಸಾಂಕ್ರಾಮಿಕ ಸೋಂಕು ಅಡ್ಡಿ ಉಂಟು ಮಾಡಿದ್ದರಿಂದ ಸಮಾವೇಶವನ್ನು 2022ಕ್ಕೆ ಮುಂದೂಡಲಾಗಿತ್ತು.
36ನೇ ಅಂತಾರಾಷ್ಟ್ರೀಯ ಭೂವಿಜ್ಞಾನ ಸಮಾವೇಶದ ಸ್ಮರಣಾರ್ಥ ಭಾರತವು ಮೂರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಿದ್ದು, ಅದರಲ್ಲಿ ಮೊದಲ ದಿನದ ಸಮಾವೇಶದ ಪ್ರಮುಖ ಕಾರ್ಯಕ್ರಮಗಳು ಮೇಳೈಸಲಿವೆ. 58 ವರ್ಷಗಳ ಹಿಂದೆ ಭಾರತವು 22ನೇ ಅಂತಾರಾಷ್ಟ್ರೀಯ ಭೂವಿಜ್ಞಾನ ಸಮಾವೇಶದ ಪ್ರಾಯೋಜಕತ್ವ ವಹಿಸಿತ್ತು. ಇದು ಏಷ್ಯಾ ಖಂಡದ ನೆಲದಲ್ಲಿ ನಡೆದ ಚೊಚ್ಚಲ ಸಮಾವೇಶ ಎಂಬುದು ಗಮನಾರ್ಹ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ