ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸಾರ್ವತ್ರಿಕ ಚುನಾವಣೆ ಮೇ 10ರಂದು ನಡೆಯಲಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 29 ರಿಂದ ಮೇ 6 ರವರೆಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವಾದ ಶನಿವಾರದಂದು ಬೆಂಗಳೂರಿನಲ್ಲಿ 3773 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದ ಅಧಿಕೃತ ಮಾಹಿತಿ ಪ್ರಕಾರ, ಶನಿವಾರದಂದು 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೆತನರು ಸೇರಿದಂತೆ ಒಟ್ಟು 3773 ಮಂದಿ ಮತ ಚಲಾಯಿಸಿದ್ದಾರೆ.
ನಗರದದಲ್ಲಿ 80 ವರ್ಷ ಮೇಲ್ಪಟ್ಟವರು 2,35,140 ಮತದಾರರಿದ್ದಾರೆ. 9,152 ಮಂದಿ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಜೊತೆಗೆ ವಿಶೇಷ ಚೇತನರು 26,058 ಮತದಾರರಿದ್ದು, 119 ಮಂದಿ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿರುತ್ತಾರೆ. ಈ ಪೈಕಿ ಶನಿವಾರದಂದು 3727 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 46 ಮಂದಿ ವಿಶೇಷ ಚೇತನರು ಸೇರಿದಂತೆ ಒಟ್ಟು 3773 ಮಂದಿ ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 29 ರಿಂದ ಮೇ 6 ರವರೆಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸುತ್ತದೆ.