ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಿಂದ ದೇಶಕ್ಕೆ ಬಂದು ಮದುವೆಯ ಹೆಸರಲ್ಲಿ 300 ಮಹಿಳೆಯರಿಗೆ ವಂಚಿಸಿ, ಕೋಟ್ಯಂತರ ರೂಪಾಯಿ ದೋಚಿದ 38ವರ್ಷದ ಗರುಬಾ ಗಲುಂಜೆ ಎಂಬ ನೈಜೀರಿಯನ್ ವ್ಯಕ್ತಿಯನ್ನು ನೋಯ್ಡಾ ಸೈಬರ್ ಕ್ರೈಂ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಲಾಗೋಸ್ ಪ್ರಾಂತ್ಯಕ್ಕೆ ಸೇರಿದ ಗರುಬಾ ಗಲುಂಜೆ ದೆಹಲಿಯ ಕಿಶನ್ಗಢದಲ್ಲಿ ವಾಸ ಮಾಡುತ್ತಾ ಮದುವೆ ವೆಬ್ಸೈಟ್ಗಳು, ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರೊಂದಿಗೆ ಸ್ನೇಹ ಬೆಳೆಸುತ್ತಾನೆ. ತಾನು ಕೆನಡಾದಲ್ಲಿ ಸೆಟಲ್ ಆಗಿರುವ ಭಾರತೀಯ ಮೂಲದ ವ್ಯಕ್ತಿ, ವೆಲ್ ಸೆಟಲ್ ಆಗಿದ್ದು, ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುತ್ತಿರುವುದಾಗಿ ನಂಬಿಸಿ ಹಣ ದೋಚಿದ್ದಾನೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನೆಲೆಸಿರುವ ಯುವತಿ ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ. ‘ಜೀವನ್ ಸಾಥಿ’ ವೆಡ್ಡಿಂಗ್ ವೆಬ್ ಸೈಟ್ ನಲ್ಲಿ ಯುವತಿ ಹೆಸರು ನೋಂದಾಯಿಸಿದ್ದಳು. ಇದೇ ವೆಬ್ಸೈಟ್ನಲ್ಲಿ ಇಂಡೋ-ಕೆನಡಿಯನ್ ಸಂಜಯ್ ಸಿಂಗ್ ಆಗಿ ಈ ಖದೀಮ ಕೂಡಾ ಹೆಸರು ನೊಂದಾಯಿಸಿರುವುದಾಗಿ ನೋಯ್ಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೀಟಾ ಯಾದವ್ ಹೇಳಿದ್ದಾರೆ. ಈ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು ವಿವಿಧ ಖಾತೆಗಳಿಗೆ ಸುಮಾರು 60ಲಕ್ಷ ಹಣವನ್ನು ಜಮಾ ಮಾಡಿಸಿಕೊಂಡಿದ್ದಾನೆ. ಬಳಿಕ ಯುವತಿ ತಾನು ಮೋಸ ಹೋಗಿರುವುದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ಕಿರಾತಕನ ಬಣ್ಣ ಬಯಲು ಮಾಡಿದ್ದಾರೆ.
ಇಲ್ಲಿನ ಯುವತಿಯರನ್ನು ವಂಚಿಸಿ, ಹಣ ದೋಚಿದ್ದಲ್ಲದೆ, ಅಂತಾರಾಷ್ಟ್ರೀಯ ಹಣ ವಿನಿಮಯ ಸೇವೆಗಳ ಮೂಲಕ ನೈಜೀರಿಯಾದಲ್ಲಿರುವ ತನ್ನ ಕುಟುಂಬ ಸದಸ್ಯರಿಗೆ ಹಣವನ್ನು ವರ್ಗಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಪಾಸ್ಪೋರ್ಟ್ಗಳ ನಕಲು ಪ್ರತಿಗಳು, ಏಳು ಮೊಬೈಲ್ ಫೋನ್ಗಳು ಮತ್ತು ಬ್ಯಾಂಕ್ ಆಫ್ ಥೈಲ್ಯಾಂಡ್, ನ್ಯಾಷನಲ್ ಬ್ಯಾಂಕ್ ಆಫ್ ದುಬೈ, ಇಂಟರ್ಪೋಲ್, ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಮತ್ತು ಎಫ್ಬಿಐ ಹೆಸರಿನ ನಕಲಿ ಪತ್ರಗಳು ಸೇರಿದಂತೆ 15 ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 419 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 420 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.