ಹೊಸದಿಗಂತ ವರದಿ ಮೈಸೂರು:
ಅರಮನೆ ನಗರಿ ಮೈಸೂರಿನಲ್ಲಿ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ, ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲೂ ವಿಶೇಷವಿದೆ. ಈ ತ್ರಿವಳಿ ಮಕ್ಕಳಿಗೆ ಅವಧಿಗೂ ಮುನ್ನವೇ ಜನ್ಮ ನೀಡಿದ್ದಾರೆ. ಅಂದರೆ 9 ತಿಂಗಳಿಗೆ ಜನಿಸಬೇಕಾದ ಮಕ್ಕಳು ಏಳೇ ತಿಂಗಳಿಗೆ ಜನ್ಮ ತಾಳಿವೆ.
ಲಕ್ಷ್ಮಿ, ತ್ರಿವಳಿ ಮಕ್ಕಳಿಗೆ 7 ತಿಂಗಳಿಗೆ ಜನ್ಮ ನೀಡಿದ ತಾಯಿ. ಈಕೆ ಮೈಸೂರಿನಲ್ಲಿರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನ್ಮ ನೀಡಿದ್ದಾರೆ. ಜನಿಸಿರುವ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗು ಆರೋಗ್ಯವಾಗಿವೆ. 30ವಾರದಲ್ಲಿ ಅಂದರೆ ಗರ್ಭಧಾರಣೆಯ ಅವಧಿಯ ಏಳನೇ ತಿಂಗಳಿನಲ್ಲಿ ಪ್ರಸೂತಿ ತಜ್ಞೆ ಡಾ.ಲೀಲಾವತಿ ತುರ್ತು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದರು. ಮೂರು ಮಕ್ಕಳನ್ನು ಐಸಿಯುನಲ್ಲಿ ಇರಿಸಿ ವೈದ್ಯೆ ಡಾ.ನಂದಿತಾ ನಿಗಾವಹಿಸಿದ್ದರು. ಮೂರು ವಾರಗಳ ಬಳಿಕ ತಾಯಿ ಮತ್ತು ಮಕ್ಕಳನ್ನು ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.