41 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್: ಕೇಂದ್ರ ಆರೋಗ್ಯ ಸಚಿವಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಿದ 41 ಔಷಧ ಮಾದರಿಗಳು ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ (NSQ) ಎಂದು ಭಾರತದ ಔಷಧ ನಿಯಂತ್ರಕ ಪತ್ತೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು 70 ಔಷಧ ಮಾದರಿಗಳನ್ನು ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ (ಪ್ರಮಾಣಿತ ಗುಣಮಟ್ಟದಲ್ಲ) ಎಂದು ಗುರುತಿಸಿವೆ. ಇದಲ್ಲದೆ, ಎರಡು ಔಷಧ ಮಾದರಿಗಳನ್ನು ನಕಲಿ ಔಷಧಗಳೆಂದು ಗುರುತಿಸಲಾಗಿದೆ.

ಎರಡು ಮಾದರಿಗಳಲ್ಲಿ ಒಂದು ಔಷಧದ ಮಾದರಿಯನ್ನು ಬಿಹಾರ ಡ್ರಗ್ಸ್ ಕಂಟ್ರೋಲ್ ಅಥಾರಿಟಿ ಮತ್ತು ಇನ್ನೊಂದು ಮಾದರಿಯನ್ನು CDSCO (ಉತ್ತರ ವಲಯ), ಗಾಜಿಯಾಬಾದ್‌ನಿಂದ ಆಯ್ಕೆ ಮಾಡಲಾಗಿತ್ತು.

ಇನ್ನು ಇತರ ಕಂಪನಿಗಳ ಒಡೆತನದ ಬ್ರ್ಯಾಂಡ್ ಹೆಸರುಗಳನ್ನು ಬಳಸಿಕೊಂಡು ಅನಧಿಕೃತ ಮತ್ತು ಅಪರಿಚಿತ ತಯಾರಕರು ಔಷಧಗಳನ್ನು ತಯಾರಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಮಾಣಿತ ಗುಣಮಟ್ಟದಲ್ಲದ ಮತ್ತು ನಕಲಿ ಔಷಧಗಳ ಪಟ್ಟಿಯನ್ನು ಪ್ರತಿ ತಿಂಗಳು CDSCO ಪೋರ್ಟಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಸಂಸದೀಯ ಸಮಿತಿಯು ಇತ್ತೀಚೆಗೆ ದೇಶದಲ್ಲಿ ನಕಲಿ ಮತ್ತು ಕಲಬೆರಕೆ ಔಷಧಗಳ ತಯಾರಿಕೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಫಾರ್ಮಾಸ್ಯುಟಿಕಲ್ಸ್ ಇಲಾಖೆಗೆ (DoP) ಕೇಳಿದೆ. ರಸಗೊಬ್ಬರಗಳ ಸಂಸದೀಯ ಸ್ಥಾಯಿ ಸಮಿತಿಯು 2024-25ರ ಆರ್ಥಿಕ ವರ್ಷಕ್ಕೆ ಡಿಒಪಿಯ ಅನುದಾನದ ಬೇಡಿಕೆಗಳ ಕುರಿತಾದ ತನ್ನ ಐದನೇ ವರದಿಯಲ್ಲಿ 2015-16 ರಿಂದ 2018-19ರ ಅವಧಿಯಲ್ಲಿ ಸುಮಾರು 2.3 ಲಕ್ಷ ಔಷಧಿಗಳ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 593 ನಕಲಿ ಮತ್ತು 9,266 ಪ್ರಮಾಣಿತ ಗುಣಮಟ್ಟವಲ್ಲ ಎಂದು ಘೋಷಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಕೇವಲ 35 ಮಂದಿಗೆ ಮಾತ್ರ ಶಿಕ್ಷೆಯಾಗಿದೆ.

ಇಲ್ಲಿಯವರೆಗೂ ನಕಲಿ ಅಥವಾ ಕಲಬೆರಕೆ ಔಷಧಗಳಿಗೆ ಸಂಬಂಧಿಸಿದ ಒಟ್ಟು 593 ಪ್ರಕರಣಗಳಲ್ಲಿ ಕೇವಲ 5.9 ಪ್ರತಿಶತವನ್ನು ಮಾತ್ರ ಪರಿಹರಿಸಲಾಗಿದೆ ಎಂದು ಸಮಿತಿ ಹೇಳಿದೆ. ಉಳಿದ ಪ್ರಕರಣಗಳು ಆಯಾ ನ್ಯಾಯಾಲಯಗಳಲ್ಲಿ ವಿವಿಧ ಹಂತದ ವಿಚಾರಣೆಗಳಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!