ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯದಲ್ಲಿ ಈವರೆಗೂ ಕೋವಿಡ್ನಿಂದ (Covid) ಮೃತಪಟ್ಟ ಕುಟುಂಬಗಳಿಗೆ 446 ಕೋಟಿ ರೂ. ಪರಿಹಾರ (Compensation) ವಿತರಣೆ ಮಾಡಲಾಗಿದ್ದು, ನೈಜತೆ ಆಧರಿಸಿ ಈಗಲೂ ಪರಿಹಾರ ನೀಡಿಕೆ ಮುಂದುವರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರ 1 ಲಕ್ಷ ಕೇಂದ್ರದ 50 ಸಾವಿರ ಸೇರಿ ಒಟ್ಟು 1.5 ಲಕ್ಷ ರೂ. ಗಳನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಬುಲೆಟಿನ್ನಲ್ಲಿ ಹೆಸರು ಬಾರದೆ ಇದ್ದು, ನಂತರ ಮೃತರ ಕುಟುಂಬದವರು ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುತ್ತದೆ. ಆದರೆ ನೈಜತೆ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಅಲ್ಲಿ ಕೋವಿಡ್ನಿಂದ ಸಾವು ಎಂದು ಖಚಿತವಾದರೆ ಮಾತ್ರ ಪರಿಹಾರ ಕೊಡಲಾಗುತ್ತದೆ. ಈವರೆಗೂ ರಾಜ್ಯದಲ್ಲಿ 446 ಕೋಟಿ ರೂ. ಪರಿಹಾರ ಕೊಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಪರಿಹಾರಕ್ಕೆ 10,137 ಅರ್ಜಿಗಳು ಬಂದಿದ್ದವು. ಈ ಪೈಕಿ 3,450 ಬಿಪಿಎಲ್ ಪ್ರಕರಣಗಳಾಗಿವೆ. ಈಗಲೂ ಪರಿಹಾರ ಕೊಡಲಾಗುತ್ತಿದೆ. ಮೃತರಾದವರ ಕುಟುಂಬದವರಲ್ಲದವರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕೊಡಲು ಸಾಧ್ಯವಿಲ್ಲ. ಇದು ಸರ್ಕಾರದ ಹಣ, ದುರುಪಯೋಗ ತಡೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವವರ ಹೆಸರು ಮೃತ ವ್ಯಕ್ತಿಯ ಹೆಸರು ಇರುವ ಬಿಪಿಎಲ್ ಪಡಿತರ ಕಾರ್ಡ್ನಲ್ಲಿ ಇರುವುದು ಕಡ್ಡಾಯ ಎಂದರು.