ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದ ಹನ್ನೊಂದು ಪ್ರಾಂತ್ಯಗಳಲ್ಲಿ ಕಳೆದ ವಾರ ಉಂಟಾದ ಭೀಕರ ಪ್ರವಾಹಕ್ಕೆ 47 ಮಂದಿ ಸಾವನ್ನಪ್ಪಿ, 57 ಜನರು ಗಾಯಗೊಂಡಿದ್ದಾರೆ ಎಂದು ಅಫ್ಗಾನಿಸ್ತಾನದ ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿನ ಮೈದಾನ ವಾರ್ಡಕ್, ಕಾಬೂಲ್, ಕುನಾರ್, ಪಕಿತಾ, ಖೋಸ್ಟ್, ನುರಿಸ್ತಾನ್, ನಂಗರ್‌ಹಾರ್, ಘಜ್ನಿ, ಪಕ್ತಿಕಾ ಮತ್ತು ಹೆಲ್ಮಂಡ್ ಪ್ಯಾಂತ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದಾಗಿ 47 ಜನರು ಸಾವನ್ನಪ್ಪಿದ್ದಾರೆ ಮತ್ತು 57 ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣೆಯ ಮಾಧ್ಯಮ ವಿಭಾಗದ ಮುಖ್ಯಸ್ಥ ಶಫಿವುಲ್ಲಾ ರಹೀಮಿ ಹೇಳಿದ್ದಾರೆ.
ಭಾನುವಾರ ಮುಂಜಾನೆ ಪೂರ್ವ ಕಾಬೂಲ್‌ನ ಜಲ್ರೆಜ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 32 ಜನರು ಅಸುನೀಗಿದ್ದಾರೆ. 500 ಮನೆಗಳು, ಕೃಷಿ ಭೂಮಿಗೆ ಹಾನಿಯಾಗಿದೆ. ಪರ್ವಾನ್ ಪ್ರಾಂತ್ಯದಲ್ಲಿ ಮಂಗಳವಾರದ ಪ್ರವಾಹಕ್ಕೆ 9 ಜನ ಬಲಿಯಾಗಿದ್ದು 7 ಮಂದಿ ಗಾಯಗೊಂಡಿದ್ದಾರೆ. ಇನ್ನು ಹಿಂದಿನ ವಾರ ಪ್ರವಾಹಕ್ಕೆ ಸಿಲುಕಿ 31 ಜನರು ಸಾವನ್ನಪ್ಪಿ, 74 ಮಂದಿ ಗಾಯಗೊಂಡಿದ್ದು, 41 ಮಂದಿ ಕಾಣೆಯಾಗಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ಭೀಕರ ಪ್ರವಾಹದಿಂದಾಗಿ 250ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಪ್ರವಾಹಕ್ಕೆ ಸಿಕ್ಕ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 30ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರಿಗೆ ಆಶ್ರಯ ಹಾಗು ಮೂಲಭೂತ ಅಗತ್ಯಗಳನ್ನು ಒದಗಿಸುವಂತೆ ತಾಲಿಬಾನ್ ಮತ್ತು ಮಾನವೀಯ ಸಂಘಟನೆಗಳಿಗೆ ಮನವಿ ಮಾಡಲಾಗುತ್ತಿದೆ. ಪ್ರವಾಹವಲ್ಲದೆ, ಭೂಕಂಪ, ಹಿಮಕುಸಿತ, ಭೂಕುಸಿತ ಮತ್ತು ಬರ ಸೇರಿದಂತೆ ನೈಸರ್ಗಿಕ ವಿಕೋಪಗಳು ಅಫ್ಘಾನಿಸ್ತಾನದಲ್ಲಿ ಆಗ್ಗಾಗ್ಗೆ ಸಂಭವಿಸುತ್ತಿರುತ್ತವೆ.