ಹೊಸದಿಗಂತ ಡಿಜಿಟಲ್ ಡೆಸ್ಕ್
ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ರೋಗದ ವಿರುದ್ಧ ರಾಜ್ಯದ ಅಂದಾಜು 48 ಲಕ್ಷ ಮಕ್ಕಳಿಗೆ ವಿಶೇಷ ಲಸಿಕೆ ಅಭಿಯಾನವನ್ನು ಡಿಸೆಂಬರ್ 5 ರಿಂದ ಮೂರು ವಾರಗಳ ಕಾಲ ಕರ್ನಾಟಕದಲ್ಲಿ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.
ಎನ್ಸೆಫಾಲಿಟಿಸ್ ಎನ್ನುವುದು ಸೋಂಕಿನಿಂದ ಅಥವಾ ಅಲರ್ಜಿಯ ಪ್ರತಿಕ್ರಿಯೆಯಿಂದ ಉಂಟಾಗುವ ಮೆದುಳಿನ ಉರಿಯೂತವಾಗಿದೆ.
“ಭಾರತದಲ್ಲಿ ಪ್ರತಿ ವರ್ಷ ಒಟ್ಟು 68,000 ಪ್ರಕರಣಗಳು ವರದಿಯಾಗುತ್ತವೆ. ಇವುಗಳಲ್ಲಿ ಸಾವಿನ ಪ್ರಮಾಣವು ಸುಮಾರು 20 ರಿಂದ 30 ಪ್ರತಿಶತದಷ್ಟಿದೆ. ಗುಣಮುಖರಾದವರಲ್ಲಿ, 30 ರಿಂದ 50 ಪ್ರತಿಶತ ಜನರು ಸಂವೇದನೆ ಕಳೆದುಕೊಂಡು ದೌರ್ಬಲ್ಯ ಸ್ಥಿತಿಯನ್ನು ಅನುಭವಿಸುತ್ತಾರೆ. ಮತ್ತು ಇತರ ಶಾಶ್ವತ ದೈಹಿಕ ಮತ್ತು ಮಾನಸಿಕ ಅಸಾಮರ್ಥ್ಯಗಳೂ ಬಾಧಸುತ್ತವೆ” ಎಂದು ಸುಧಾಕರ್ ಹೇಳಿದರು.
ಮೊದಲ ವಾರದಲ್ಲಿ (ಡಿಸೆಂಬರ್) ಪ್ರಾಥಮಿಕವಾಗಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಕೇಂದ್ರೀಕರಿಸಿ ಲಸಿಕೆಗಳನ್ನು ನೀಡಲಾಗುವುದು. ಮುಂದಿನ ಎರಡು ವಾರಗಳಲ್ಲಿ ನಾವು ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಸಮುದಾಯಗಳಲ್ಲಿ ಲಸಿಕೆ ಅಭಿಯಾನದ ಮೇಲೆ ಕೇಂದ್ರೀಕರಿಸುತ್ತೇವೆ. ಕೇಂದ್ರ ಆರೋಗ್ಯ ಸಚಿವಾಲಯವು ಜೆನ್ವಾಕ್ ಲಸಿಕೆಯನ್ನು ಪೂರೈಸಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದಡಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆಯನ್ನು ಈ ವೈರಸ್ನ 10 ಸ್ಥಳೀಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ, 9 ತಿಂಗಳು ಪೂರ್ಣಗೊಂಡ ನಂತರ ಮಕ್ಕಳಿಗೆ JE ಲಸಿಕೆಯನ್ನು ನೀಡಲಾಗುತ್ತದೆ ಮತ್ತು 1.5 ವರ್ಷ ವಯಸ್ಸಿನಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ